ಚಳ್ಳಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು, ತಲೆಮರೆಸಿಕೊಂಡಿರುವ ಅಧಿಕಾರಿ ಅಮಾನತು

ಕಳೆದ ಐದು ವರ್ಷಗಳಿಂದ ತನ್ನ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಳ್ಳಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಚಿತ್ರದುರ್ಗ: ಕಳೆದ ಐದು ವರ್ಷಗಳಿಂದ ತನ್ನ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಳ್ಳಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿ.ಬಿ. ಉಮೇಶ್ ವಿರುದ್ಧ 25 ವರ್ಷದ ಸೋದರ ಸಂಬಂಧಿ ನೀಡಿದ ದೂರಿನ ಮೇರೆಗೆ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅಧಿಕಾರಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ನೀಡಿರುವ ದೂರಿನಲ್ಲಿ, ತಮ್ಮ ಕುಟುಂಬಕ್ಕೆ ಜಮೀನು ವಿವಾದವಿತ್ತು. ನನ್ನ ತಾಯಿಯ ಕೋರಿಕೆಯ ಮೇರೆಗೆ ದಾವಣಗೆರೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡ ಉಮೇಶ್ ಅವರು 2017 ರಲ್ಲಿ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದರು. ಬಳಿಕ ತನ್ನ ಪೋಸ್ಟಿಂಗ್ ಸ್ಥಳದಲ್ಲಿ ಭೇಟಿಯಾಗುವಂತೆ ನನ್ನನ್ನು ಕೇಳಿಕೊಂಡರು.

2017ರ ಸೆ.13ರಂದು ದಾವಣಗೆರೆಯಲ್ಲಿ ಉಮೇಶ್‌ನನ್ನು ಭೇಟಿಯಾಗಲು ಹೋದಾಗ ಆತ ತನ್ನ ಮೇಲೆ ಅತ್ಯಾಚಾರ ಎಸಗಿ, ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಯಾರಿಗೂ ಹೇಳದಿದ್ದರೆ, ತನ್ನ ಕುಟುಂಬದ ಬದುಕನ್ನು ಬೀದಿಗೆ ತರುವುದಾಗಿ ಹೇಳಿದ್ದಾಗಿ ಯುವತಿ ಆರೋಪಿಸಿದ್ದಾಳೆ.

ಅದಾದ ಬಳಿಕ ನಾನು ಸ್ಪಂದಿಸದಿದ್ದರೂ ಉಮೇಶ್ ಪದೇ ಪದೇ ಕರೆ ಮಾಡುತ್ತಿದ್ದರು. ಕೊನೆಗೆ ತನ್ನ ಮನೆಗೆ ಬಂದು ಅತ್ಯಾಚಾರ ಎಸಗಿದ್ದಾರೆ. ಇನ್ಸ್‌ಪೆಕ್ಟರ್‌ಗೆ ಹೆದರಿ ಯುವತಿ ಬೇರೆ ಕಡೆ ಕೆಲಸ ಮಾಡಲು ಆರಂಭಿಸಿದ್ದಾಳೆ. ಆದರೆ, ಅಲ್ಲಿಗೂ ತೆರಳಿದ ಉಮೇಶ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.

ದೂರುದಾರರ ಪ್ರಕಾರ, ಇನ್ಸ್‌ಪೆಕ್ಟರ್‌ಗೆ ಇಬ್ಬರು ಹೆಂಡತಿಯರಿದ್ದು, ತನ್ನ ಮೂರನೇ ಹೆಂಡತಿಯಂತೆ ತನ್ನೊಂದಿಗೆ ವಾಸಿಸಲು ಹೇಳಿದ್ದ. 2021 ರ ಅಕ್ಟೋಬರ್ 2 ರಂದು ಚಳ್ಳಕೆರೆಯ ನರ್ಸಿಂಗ್ ಹೋಮ್‌ನಲ್ಲಿ ನಾನು ಗರ್ಭಪಾತವನ್ನು ಮಾಡಿಸಿಕೊಂಡಿದ್ದೇನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಉಮೇಶ್ ಈ ಹಿಂದೆಯೂ ಹಲವು ಬಾರಿ ಮಾತ್ರೆಗಳನ್ನು ಸೇವಿಸಿ ಭ್ರೂಣವನ್ನು ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದರು. ತನ್ನನ್ನು ಬಿಡುವಂತೆ ಹಲವು ಬಾರಿ ಮನವಿ ಮಾಡಿದರೂ ಪೊಲೀಸ್ ಇನ್ಸ್‌ಪೆಕ್ಟರ್‌ನ ದೌರ್ಜನ್ಯ ಮುಂದುವರಿದಿತ್ತು. ನಾನು ಹೇಳಿದಂತೆ ಕೇಳದಿದ್ದರೆ ಮತ್ತೊಮ್ಮೆ ಜಮೀನು ವಿವಾದವನ್ನು ಎಳೆದು ತಂದು, ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ಬರುವಂತೆ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದರು ಎಂದು ಯುವತಿ ಆರೋಪಿಸಿದ್ದಾಳೆ.

ಸದ್ಯ, ಆರೋಪಿ ಇನ್‌ಸ್ಪೆಕ್ಟರ್‌ ಅನ್ನು ಅಮಾನತು ಮಾಡಲಾಗಿದೆ. ಆತನನ್ನು ಇನ್ನೂ ಬಂಧಿಸಿಲ್ಲ' ಎಂದು ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ಕೆ. ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com