ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ: ಧರಣಿ ಕೈ ಬಿಟ್ಟ ಪ್ರಸನ್ನಾನಂದಪುರಿ ಸ್ವಾಮೀಜಿ

ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯದ ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋಟ್ ಅಂಕಿತ ಹಾಕಿದ ಬೆನ್ನಲ್ಲೇ ಪ್ರಸನ್ನಾನಂದಪುರಿ ಶ್ರೀ ಅವರು ತಮ್ಮ ಧರಣಿ ಅಂತ್ಯಗೊಳಿಸಿದ್ದಾರೆ.
ಆರ್. ಅಶೋಕ್
ಆರ್. ಅಶೋಕ್
Updated on

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ 'ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು ಸುಗ್ರೀವಾಜ್ಞೆ- 2022 ಕ್ಕೆ ರಾಜ್ಯದ ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋಟ್ ಅಂಕಿತ ಹಾಕಿದ ಬೆನ್ನಲ್ಲೇ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಅಹೋರಾತ್ರ ಧರಣಿ ನಡೆಸ್ತಿದ್ದ ಪ್ರಸನ್ನಾನಂದಪುರಿ ಶ್ರೀ ಅವರು ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.  

ಕಳೆದ 257 ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಶ್ರೀಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿತ್ತು. ಸರ್ಕಾರದಿಂದ ಸುಗ್ರೀವಾಜ್ಞೆ ಪ್ರಕಟ ಹಿನ್ನೆಲೆಯಲ್ಲಿ ಧರಣಿ ಕೈಬಿಟ್ಟಿರುವ ಪ್ರಸನ್ನಾನಂದಪುರಿ ಶ್ರೀಗಳು ಇನ್ನರೆಡು ದಿನಗಳಲ್ಲಿ ನಮ್ಮ ಬೇಡಿಕೆಗೆ ಸಹಕರಿಸಿದ ಸಿಎಂ ಬೊಮ್ಮಾಯಿ‌ ಹಾಗೂ ಅವರ ಸಂಪುಟ ಸದಸ್ಯರಿಗೆ ಹಾಗೂ ವಿಪಕ್ಷ ನಾಯಕರನ್ನು ಕರೆಸಿ  ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು. ಅಲ್ಲದೆ, ಧರಣಿಗೆ ಪೂರ್ಣ ವಿರಾಮ ಹೇಳುವುದಾಗಿ ಘೋಷಿಸಿದರು.

ಸಚಿವ ಆರ್.ಅಶೋಕ್ ಅವರು ಮಾತನಾಡಿ, “ರಾಜ್ಯಪಾಲರು ಮಧ್ಯಪ್ರದೇಶದಲ್ಲಿದ್ದರೂ, ನಾವು ಅವರ ಒಪ್ಪಿಗೆಯನ್ನು ಪಡೆದುಕೊಂಡಿದ್ದೇವೆ ಮತ್ತು ಇದನ್ನು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ದೀಪಾವಳಿ ಉಡುಗೊರೆಯಾಗಿ ನೀಡಿದ್ದೇವೆ. ಬೊಮ್ಮಾಯಿ ಬಿಟ್ಟರೆ ಬೇರೆ ಯಾವ ನಾಯಕರೂ ಜೇನುಗೂಡು ಹೊಡೆಯುವ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ಸ್ವಾಮೀಜಿಗಳು ಒತ್ತಾಯ ಮಾಡುತ್ತಿದ್ದಂತೆಯೇ ಸೂರ್ಯಗ್ರಹಣಕ್ಕೂ ಮುನ್ನವೇ ಮೀಸಲಾತಿ ಒದಗಿಸಿದ್ದೇವೆಂದು ಹೇಳಿದರು. 

ಸ್ವಾಮೀಜಿಗಳು ಇಲ್ಲೇ ಕಾಯಂ ಹೋರಾಟ ಮಾಡಬೇಕು ಎಂದು ಬಹಳಷ್ಟು ಜನ (ವಿಪಕ್ಷಗಳು) ಬಯಸಿದ್ದರು. ಅವರ ಉದ್ದೇಶ ಮೀಸಲಾತಿ ಪ್ರಮಾಣ ಹೆಚ್ಚಿಸಬಾರದು ಮತ್ತು ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕು ಎಂಬುದೇ ಆಗಿತ್ತು. ಆದರೆ, ನಮ್ಮ ಮುಖ್ಯಮಂತ್ರಿ ಚಾಣಕ್ಯರು, ಯಾವ ಸಮಯದಲ್ಲಿ ಏನು ಮಾಡಬೇಕು. ಕಲ್ಲು ಹೊಡೆದರೆ ಮಾವಿನಕಾಯಿ ಬೀಳಬೇಕು ಎಂಬುದು ಅವರಿಗೆ ಗೊತ್ತು’. ಇದೀಗ ಪ್ರತಿಭಟನೆ ಕೈಬಿಟ್ಟು, ದೀಪಾವಳಿಯನ್ನು ಆಚರಿಸಿ. ಇದು ದೀಪಾವಳಿಯ ಉಡುಗೊರೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com