ಶೀಘ್ರದಲ್ಲೇ ಕಿತ್ತೂರಿನಲ್ಲಿ 1000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆ: ಸಿಎಂ ಬೊಮ್ಮಾಯಿ

ಕಿತ್ತೂರು ಬಳಿ ಕೆಐಎಡಿಬಿ ಜಾಗದಲ್ಲಿ 1,000 ಎಕರೆ ಕೈಗಾರಿಕಾ ಟೌನ್‌ಶಿಪ್‌ ನಿರ್ಮಿಸಲು ನಿರ್ಧರಿಸಲಾಗಿದ್ದು, ಶೀಘ್ರ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಕಿತ್ತೂರು (ಬೆಳಗಾವಿ): ಕಿತ್ತೂರು ಬಳಿ ಕೆಐಎಡಿಬಿ ಜಾಗದಲ್ಲಿ 1,000 ಎಕರೆ ಕೈಗಾರಿಕಾ ಟೌನ್‌ಶಿಪ್‌ ನಿರ್ಮಿಸಲು ನಿರ್ಧರಿಸಲಾಗಿದ್ದು, ಶೀಘ್ರ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದರು. 

ಬ್ರಿಟಿಷರ ವಿರುದ್ಧ ಕಿತ್ತೂರಿನ ರಾಣಿ ಚೆನ್ನಮ್ಮ ಅವರು ನಡೆಸಿದ ಹೋರಾಟದ ನೆನಪಿಗಾಗಿ ಪ್ರತಿ ವರ್ಷ ಆಚರಿಸುವ ಕಿತ್ತೂರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ, ಧಾರವಾಡ-ಬೆಳಗಾವಿ ರೈಲು ಮಾರ್ಗವನ್ನು ಕಿತ್ತೂರು ಮಾರ್ಗವಾಗಿ ನಿರ್ಮಿಸಲಾಗುವುದು. ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಸಂಬಂಧಿಸಿ ಇನ್ನು ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಸಿಗಲಿದೆ. ಅಲ್ಲದೆ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಿದೆ. ಅದರ ಅನುಷ್ಠಾನಕ್ಕೂ ಶೀಘ್ರ ಕಾಲ ಕೂಡಿ ಬರಲಿದೆ ಎಂದು ತಿಳಿಸಿದರು.

ಚನ್ನಮ್ಮನ ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬುದು ಹಿಂದಿನ ನಂಬಿಕೆ. ಇದಕ್ಕೆ ಸಡ್ಡು ಹೊಡೆದು ಮುಖ್ಯಮಂತ್ರಿಯಾಗಿ 2 ಬಾರಿ ಉತ್ಸವಕ್ಕೆ ಬಂದಿದ್ದೇನೆ ಎಂದರು. 

ಕಿತ್ತೂರು ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತೇ ಎಂಬ ಮೌಢ್ಯ ಎಲ್ಲ ಮುಖ್ಯಮಂತ್ರಿಗಳಲ್ಲಿದೆ. ಎಸ್‌.ಬಂಗಾರಪ್ಪ ಸಿಎಂ ಆಗಿದ್ದಾಗ ಕಿತ್ತೂರು ಉತ್ಸವ ಆಚರಣೆಗೆ ಚಾಲನೆ ನೀಡಿದ್ದರು. ಅವರು ಸಿಎಂ ಆಗಿ ಕಿತ್ತೂರಿಗೆ ಬಂದ ಹೋದ ಕೆಲವೇ ದಿನಗಳಲ್ಲಿ ಅಧಿಕಾರ ಹೋಗಿತ್ತು. ಆ ಬಳಿಕ ಕಿತ್ತೂರು ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಗಾದಿ ಹೋಗುತ್ತದೆ ಎಂದು ಬಿಂಬಿಸಲಾಯಿತು. ಅಂದಿನಿಂದ ಹಲವು ಮುಖ್ಯಮಂತ್ರಿಗಳು ಕಿತ್ತೂರು ಉತ್ಸವಕ್ಕೆ ಬರಲೇ ಇಲ್ಲ. 

ಕಳೆದ ವರ್ಷ ನನಗೂ ಕಿತ್ತೂರು ಉತ್ಸವಕ್ಕೆ ಹೋಗಬೇಡಿ ಎಂದು ಕೆಲವರು ಸಲಹೆ ನೀಡಿದ್ದರು. ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತೆ ಎಂಬುದು ಮೂಢನಂಬಿಕೆ ಅಷ್ಟೆ. ಚಾಮರಾಜನಗರಕ್ಕೆ ಹೋದ್ರೂ ಅಧಿಕಾರ ಹೋಗುತ್ತದೆ ಎಂದು ಹೇಳುತ್ತಾರೆ. ಕಿತ್ತೂರು ಹಾಗೂ ಚಾಮರಾಜ ನಗರ ಎರಡೂ ಕಡೆ ಮುಖ್ಯಮಂತ್ರಿಯಾಗಿ ನಾನು ಹೋಗಿ ಬಂದಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com