ಇತ್ಯರ್ಥವಾಗದ ಟಿಕೆಟ್ ದರ: ರಾಜ್ಯದಿಂದ ಭಾರತ್ ಗೌರವ್ ರೈಲು ಆರಂಭ ಮತ್ತಷ್ಟು ವಿಳಂಬ

ಜುಲೈ ವೇಳೆಗೆ ಓಡಬೇಕಿದ್ದ ಕರ್ನಾಟಕದ ಮೊದಲ ಭಾರತ್ ಗೌರವ್ ರೈಲು(ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್ ರೈಲು) ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕಾಶಿ, ಪ್ರಯಾಗರಾಜ್ ಹಾಗೂ ಅಯೋಧ್ಯೆ ಒಳಗೊಂಡ 7 ದಿನಗಳ....
ಭಾರತ್ ಗೌರವ್ ರೈಲು
ಭಾರತ್ ಗೌರವ್ ರೈಲು

ಬೆಂಗಳೂರು: ಜುಲೈ ವೇಳೆಗೆ ಓಡಬೇಕಿದ್ದ ಕರ್ನಾಟಕದ ಮೊದಲ ಭಾರತ್ ಗೌರವ್ ರೈಲು(ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್ ರೈಲು) ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕಾಶಿ, ಪ್ರಯಾಗರಾಜ್ ಹಾಗೂ ಅಯೋಧ್ಯೆ ಒಳಗೊಂಡ 7 ದಿನಗಳ ಪ್ಯಾಕೇಜ್‌ಗಾಗಿ ಪ್ರತಿ ಪ್ರಯಾಣಿಕರಿಗೆ ಆರಂಭದಲ್ಲಿ ಪ್ರಸ್ತಾಪಿಸಲಾದ ಟಿಕೆಟ್ ದರ ತೀವ್ರ ಏರಿಕೆ ಮಾಡಿದ ಪರಿಮಾಮ ಮತ್ತು ಯೋಜಿತ ಮಾರ್ಗದಲ್ಲಿನ ಬದಲಾವಣೆಗಳು ರೈಲು ವಿಳಂಬಕ್ಕೆ ಕಾರಣವಾಗಿದೆ. ಹೀಗಾಗಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮಾತ್ರ ಕರ್ನಾಟಕದ ಮೊದಲ ಭಾರತ್ ಗೌರವ್ ರೈಲು ಸಂಚರಿಸುವ ಸಾಧ್ಯತೆ ಇದೆ.

ಭಾರತೀಯ ರೈಲ್ವೆ ಕ್ಯಾಟರಿಂಗ್ ಟೂರಿಸಂ ಕಾರ್ಪೊರೇಷನ್(IRCTC), ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವಾಲಯ ಹಾಗೂ ದತ್ತಿ ಇಲಾಖೆಗಳ ಸಹಯೋಗದಲ್ಲಿ ಭಾರತ್ ಗೌರವ್ ರೈಲು ಆರಂಭಿಸಲಾಗುತ್ತಿದೆ. ಈ ಪ್ರವಾಸಿ ರೈಲನ್ನು ನಿರ್ವಹಿಸಲು IRCTCಗೆ ಅವಕಾಶ ನೀಡಲು ರಾಜ್ಯ ಹಣಕಾಸು ಇಲಾಖೆ ಕಳೆದ ವಾರ 4G (ಟೆಂಡರ್‌ಗಳನ್ನು ಕರೆಯುವ ಅಗತ್ಯವಿದೆ) ವಿನಾಯಿತಿಗೆ ಅನುಮತಿ ನೀಡಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಈ ರೈಲಿಗಾಗಿ ರಾಜ್ಯ ಸರ್ಕಾರವು ರೈಲ್ವೆಗೆ ವಾರ್ಷಿಕ 3 ಕೋಟಿ ರೂ.ಗಳ ಸಾಗಣೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಜೊತೆಗೆ ಕಾರ್ಯಾಚರಣೆಯ ವೆಚ್ಚವನ್ನು ಕಿಲೋಮೀಟರ್‌ಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಕೆಲವು ತಿಂಗಳ ಹಿಂದೆ IRCTC ಪ್ರತಿ ವ್ಯಕ್ತಿಗೆ 15,000 ರೂ.ಟಿಕೆಟ್ ದರ ಪ್ರಸ್ತಾಪಿಸಿತ್ತು. ಈಗ ಪ್ರತಿ ಟಿಕೆಟ್ ದರವನ್ನು 25,000 ರೂ. ನಿಗದಿಪಡಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕಾಶಿ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ. ಸಹಾಯಧನ ಘೋಷಿಸಿದೆ. ಇದನ್ನು ಗಣನೆಗೆ ತೆಗೆದುಕೊಂಡರೂ, ಇನ್ನೂ ಪ್ರತಿ ಪ್ರಯಾಣಿಕರು 20,000 ರೂ. ಪಾವತಿಸಬೇಕಾಗುತ್ತದೆ. ಸಾರ್ವಜನಿಕರು ಇಷ್ಟು ಹಣವನ್ನು ಪಾವತಿಸಲು ಸಿದ್ಧರಿದ್ದಾರೆಯೇ ಎಂಬ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.

ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯ ಐತಿಹಾಸಿಕ ಸ್ಥಳಗಳನ್ನು ಭಾರತ ಮತ್ತು ವಿಶ್ವದ ಜನರಿಗೆ ತೋರಿಸುವ ಮತ್ತು ಆ ಮೂಲಕ ದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿ ಇಟ್ಟುಕೊಂಡು ಕೇಂದ್ರ ಸರ್ಕಾರ ವರ್ಷದ ಹಿಂದೆ 'ಭಾರತ್‌ ಗೌರವ್‌' ರೈಲು ಸೇವೆಯನ್ನು ಪರಿಚಯಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com