ಆತ್ಮಹತ್ಯೆ ಮಾಡಿಕೊಂಡ ರಾಣೆಬೆನ್ನೂರಿನ ರೈತನ ಬಗ್ಗೆ ಮಾಜಿ ಸ್ಪೀಕರ್ ಕೋಳಿವಾಡ ಹಗುರ ಮಾತು: ವಿಡಿಯೊ ವೈರಲ್, ವ್ಯಾಪಕ ಆಕ್ರೋಶ
ಬೆಂಗಳೂರು: ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ್ (K B Koliwada) ಅವರು ಪ್ರತಿನಿಧಿಸುತ್ತಿದ್ದ ರಾಣೆಬೆನ್ನೂರು ಕ್ಷೇತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಅಂತಿಮ ನಮನ ಸಲ್ಲಿಸಲು ಬಳಸಿದ ಕಠಿಣ ಮತ್ತು ಸಂವೇದನಾರಹಿತ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ್ದು ಭಾರೀ ವಿರೋಧ ವ್ಯಕ್ತವಾಗಿದೆ.
ಸಭೆಯಲ್ಲಿದ್ದ ಕೋಳಿವಾಡ ಅವರಿಗೆ ಮೃತ ರೈತ ಪರಮೇಶ್ ನಾಯಕ್ (Farmer suicide) ಕುಟುಂಬಸ್ಥರಿಂದ ದೂರವಾಣಿ ಕರೆ ಬಂದಿದೆ. 10-15 ಲಕ್ಷ ಸಾಲ ತೀರಿಸಲಾಗದೆ ನಾಯಕ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಐದು ಅವಧಿಗೆ ಶಾಸಕರಾಗಿರುವ ಕೋಳಿವಾಡ್ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರಿಂದ ಇನ್ನು ಮುಂದೆ ಕ್ಷೇತ್ರವನ್ನು ಪ್ರತಿನಿಧಿಸುವುದಿಲ್ಲ. ಕಾಂಗ್ರೆಸ್ ಬೆಂಬಲಿಗರಾಗಿದ್ದ ಪರಮೇಶ್ ನಾಯಕ್ ಅವರ ಮೃತದೇಹಕ್ಕೆ ಹಾರ ಹಾಕಲು ಕುಟುಂಬಸ್ಥರು ಅವರನ್ನು ದೂರವಾಣಿ ಮೂಲಕ ಆಹ್ವಾನಿಸಿದಾಗ, ಕೋಳಿವಾಡ ಅವರು ಅಸಭ್ಯವಾಗಿ ಮತ್ತು ಅಸಡ್ಡೆಯಿಂದ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಆ ಸಂಭಾಷಣೆಯ ವೀಡಿಯೋ ಇದೀಗ ವೈರಲ್ ಆಗಿದ್ದು, ರಾಜಕಾರಣಿಗಳು ಸೇರಿದಂತೆ ಎಲ್ಲಾ ವರ್ಗದವರಿಂದ ಖಂಡನೆ ವ್ಯಕ್ತವಾಗಿದೆ.
ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಕುಟುಂಬವನ್ನು ಮಾತನಾಡಿಸಲು ರಾಣೆಬೆನ್ನೂರಿನ ಮಾಷ್ಟೂರು ಗ್ರಾಮಕ್ಕೆ ಹೋಗಿದ್ದೆ ಎಂದರು. ಇನ್ನು ಕೋಳಿವಾಡ ಅವರು ಮಾತನಾಡಿರುವ ಬಗ್ಗೆ ಕೇಳಿದಾಗ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಕ್ಷೇತ್ರದ ಜನ ಪ್ರತಿಕ್ರಿಯೆ ನೀಡುತ್ತಾರೆ ಎಂದು ಎಂ ಎಲ್ ಸಿ ಶಂಕರ್ ಹೇಳಿದ್ದಾರೆ.
ಇನ್ನು ರಾಣೆಬೆನ್ನೂರು ವ್ಯಾಪ್ತಿಯ ಹಾವೇರಿ ಜಿಲ್ಲೆಯವರೇ ಆದ ಕೃಷಿ ಸಚಿವ ಬಿ.ಸಿ.ಪಾಟೀಲ್, ‘ರೈತರು ಸಂಕಷ್ಟದಲ್ಲಿದ್ದಾರೆ. ನಾವು ಅವರ ಸಹಾಯಕ್ಕೆ ಹೋಗುತ್ತೇವೆ ಎಂಬ ಊಹೆಯೊಂದಿಗೆ ಅವರು ನಮ್ಮನ್ನು ಕರೆಯುತ್ತಾರೆ. ಸಾರ್ವಜನಿಕ ಜೀವನದಲ್ಲಿರುವವರು ಈ ರೀತಿ ಮಾತನಾಡುವುದು ಒಳ್ಳೆಯದಲ್ಲ ಎಂದಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಚಂದ್ರಶೇಖರ್ ಮಾತನಾಡಿ, ಕೋಳಿವಾಡ್ ಕೆಟ್ಟದಾಗಿ ಮಾತನಾಡಿದ್ದಾರೆ. ಇಂತಹ ರಾಜಕಾರಣಿಗಳನ್ನು ಚುನಾವಣೆ ಸಂದರ್ಭದಲ್ಲಿ ಬೆಂಬಲಿಸಬಾರದು. ಒಂದೇ ಬಾರಿಗೆ ಸಾಲ ಮನ್ನಾ ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದರೂ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ರೈತರ ಸಂಕಷ್ಟಗಳನ್ನು ಹೇಳಿದ್ದಾರೆ.