ದೇಶದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳು, ಹೆಚ್ಚಿನವರು ನೇಣು ಬಿಗಿದುಕೊಳ್ಳುವ ಮೂಲಕ ಸಾಯುತ್ತಿದ್ದಾರೆ: ಎನ್‌ಸಿಆರ್‌ಬಿ

ಆತ್ಮಹತ್ಯೆ ಮಾಡಿಕೊಳ್ಳಲು ಇತರ ಯಾವುದೇ ವಿಧಾನಗಳಿಗಿಂತ ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳಲು ಹೆಚ್ಚಾಗಿ ಅಳವಡಿಸಿಕೊಂಡ ನೇಣು ಬಿಗಿದುಕೊಳ್ಳುವ ವಿಧಾನವನ್ನೇ ಬಳಸಿ ಅಧಿಕ ಜನರು ಸಾವಿಗೀಡಾಗುತ್ತಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ಆತ್ಮಹತ್ಯೆ ಮಾಡಿಕೊಳ್ಳಲು ಇತರ ಯಾವುದೇ ವಿಧಾನಗಳಿಗಿಂತ ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳಲು ಹೆಚ್ಚಾಗಿ ಅಳವಡಿಸಿಕೊಂಡ ನೇಣು ಬಿಗಿದುಕೊಳ್ಳುವ ವಿಧಾನವನ್ನೇ ಬಳಸಿ ಅಧಿಕ ಜನರು ಸಾವಿಗೀಡಾಗುತ್ತಿದ್ದಾರೆ. ಕುಟುಂಬ ಸಂಬಂಧಿತ ಸಮಸ್ಯೆಗಳು ಮತ್ತು ಅನಾರೋಗ್ಯದ ಮೇಲಿನ ಹತಾಶೆಯು ಭಾರತೀಯರು ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳುವಂತೆ ಮಾಡಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) 2019-21ರ ಇತ್ತೀಚಿನ ವರದಿ ಪ್ರಕಾರ, 54 ವರ್ಷಗಳಲ್ಲಿ 17.56 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ 4.7 ಕೋಟಿ ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ವಿವಿಧ ಮಾರ್ಗಗಳನ್ನು ಆಶ್ರಯಿಸಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ ಎಂದು ತಿಳಿಸಿದೆ.

2020 ರಲ್ಲಿ 88,460 ವ್ಯಕ್ತಿಗಳು ಮತ್ತು 2021 ರಲ್ಲಿ 93,580 ಜನರು ಸೀಲಿಂಗ್ ಫ್ಯಾನ್‌ಗಳು ಅಥವಾ ಛಾವಣಿಗೆ ನೇಣು ಬಿಗಿದುಕೊಂಡಿದ್ದು, ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ 58 ಕ್ಕಿಂತ ಹೆಚ್ಚು ಜನರು ತಮ್ಮ ಜೀವನವನ್ನು ಕೊನೆಗೊಳಿಸುವುದ್ಕೆ ಈ ವಿಧಾನಕ್ಕೆ ಆದ್ಯತೆ ನೀಡಿದ್ದಾರೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.

ಎನ್‌ಸಿಆರ್‌ಬಿ ವರದಿಯಿಂದ ಹೊರಹೊಮ್ಮಿದ ಆಶ್ಚರ್ಯಕರ ಸಂಗತಿಯೆಂದರೆ, ಭಾರತದಲ್ಲಿ 1998 ರಿಂದ 43,027 ಮಹಿಳೆಯರು ಸೇರಿದಂತೆ 104,713 ವ್ಯಕ್ತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

'ಆತ್ಮಹತ್ಯೆಗಳ ಹೆಚ್ಚಳದ ಪ್ರಮಾಣವು 1998 ರಿಂದ ತೀವ್ರವಾಗಿ ಏರಲು ಪ್ರಾರಂಭಿಸಿತು. ಆ ವರ್ಷದಿಂದ, ವರದಿಯಾದ ಆತ್ಮಹತ್ಯೆಗಳ ಸಂಖ್ಯೆ ಆರು ಅಂಕೆಗಳಿಗೆ ಏರಿಕೆಯಾಗಿದೆ. 2009 ರಲ್ಲಿ,  ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕೆಲವು ಸಣ್ಣ ವ್ಯತ್ಯಾಸಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 1,10,587 ಕ್ಕೆ ಏರಿಕೆಯಾಯಿತು' ಎಂದು ಎನ್‌ಸಿಆರ್‌ಬಿ ಮೂಲಗಳು ತಿಳಿಸಿವೆ.

2020 ಮತ್ತು 2019 ರಲ್ಲಿ ಕ್ರಮವಾಗಿ 1,53,052 ಮತ್ತು 1,39,123 ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಹೋಲಿಸಿದರೆ 2021 ರಲ್ಲಿ 1,65,033 ಆತ್ಮಹತ್ಯೆಗಳು ವರದಿಯಾಗುವ ಮೂಲಕ ಈ ಸಂಖ್ಯೆಗಳು ಗರಿಷ್ಠ ಮಟ್ಟವನ್ನು ತಲುಪಿದವು. 2017ರಲ್ಲಿ ಒಟ್ಟು 1,29,887 ಆತ್ಮಹತ್ಯೆಗಳು ವರದಿಯಾಗಿದ್ದು, 2018ರಲ್ಲಿ 1,34,516ಕ್ಕೆ ಏರಿಕೆಯಾಗಿದೆ.

2014 ಮತ್ತು 2021 ರ ನಡುವೆ 310 ತೃತೀಯ ಲಿಂಗಿಗಳು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. 2021 ರಲ್ಲಿ 28, 2020 ರಲ್ಲಿ 22, 2019 ರಲ್ಲಿ 17 ಹಾಗೂ 2018 ರಲ್ಲಿ 11 ಜನ ತೃತೀಯ ಲಿಂಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ ದೇಶದಾದ್ಯಂತ 131 ಸಾಮೂಹಿಕ ಮತ್ತು ಕುಟುಂಬ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ಈ ಪೈಕಿ, 197 ವಿವಾಹಿತ 143 ಅವಿವಾಹಿತರು ಸೇರಿದಂತೆ 340 ಜನರು ತಮ್ಮ ಪ್ರಾಣವನ್ನು ತೆಗೆದುಕೊಂಡಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, 2021 ರಲ್ಲಿ ತಮಿಳುನಾಡಿನಲ್ಲಿ 33 ಸಾಮೂಹಿಕ ಮತ್ತು ಕುಟುಂಬ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ನಂತರ ರಾಜಸ್ಥಾನದಲ್ಲಿ 25, ಆಂಧ್ರಪ್ರದೇಶದಲ್ಲಿ 22, ಕೇರಳದಲ್ಲಿ 12 ಮತ್ತು ಕರ್ನಾಟಕದಲ್ಲಿ 10 ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ 33 ಪ್ರಕರಣಗಳಲ್ಲಿ 80 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com