ದೆಹಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ, ಪ್ರತಿದಿನ 2 ಅತ್ಯಾಚಾರ; ಮೂರನೇ ಸ್ಥಾನದಲ್ಲಿ ಬೆಂಗಳೂರು: ಎನ್‌ಸಿಆರ್‌ಬಿ

ದೇಶದಾದ್ಯಂತ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಮೆಟ್ರೋಪಾಲಿಟನ್ ನಗರ ದೆಹಲಿ ಎಂದು ರಾಷ್ಟ್ರ ರಾಜಧಾನಿ ಕುಖ್ಯಾತಿಗೆ ಪಾತ್ರವಾಗಿದೆ. ಇಲ್ಲಿ ಕಳೆದ ವರ್ಷ ಪ್ರತಿದಿನ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ಎನ್‌ಸಿಆರ್‌ಬಿಯ ಇತ್ತೀಚಿನ ವರದಿ ತಿಳಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ದೇಶದಾದ್ಯಂತ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಮೆಟ್ರೋಪಾಲಿಟನ್ ನಗರ ದೆಹಲಿ ಎಂದು ರಾಷ್ಟ್ರ ರಾಜಧಾನಿ ಕುಖ್ಯಾತಿಗೆ ಪಾತ್ರವಾಗಿದೆ. ಇಲ್ಲಿ ಕಳೆದ ವರ್ಷ ಪ್ರತಿದಿನ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ಎನ್‌ಸಿಆರ್‌ಬಿಯ ಇತ್ತೀಚಿನ ವರದಿ ತಿಳಿಸಿದೆ.

ದೆಹಲಿಯಲ್ಲಿ 2021 ರಲ್ಲಿ ಮಹಿಳೆಯರ ವಿರುದ್ಧದ 13,892 ಅಪರಾಧ ಪ್ರಕರಣಗಳು ದಾಖಲಾಗಿವೆ. 2020ಕ್ಕೆ ಹೋಲಿಸಿದರೆ ಶೇ 40 ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ. 2020ರಲ್ಲಿ 9,782 ಆಗಿತ್ತು ಎಂದು ಅಂಕಿಅಂಶಗಳು ತೋರಿಸಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ನೀಡಿರುವ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಇತರೆ ಎಲ್ಲಾ 19 ಮಹಾನಗರಗಳ ಪೈಕಿ ಒಟ್ಟು ಅಪರಾಧಗಳ ಶೇ 32.20 ರಷ್ಟಿದೆ.

ದೆಹಲಿ ನಂತರ ವಾಣಿಜ್ಯ ನಗರಿ ಮುಂಬೈನಲ್ಲಿ 5,543 ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ 3,127 ಪ್ರಕರಣಗಳು ದಾಖಲಾಗಿವೆ. ಮುಂಬೈ ಮತ್ತು ಬೆಂಗಳೂರು 19 ಮಹಾನಗರಗಳ ಪೈಕಿ ಒಟ್ಟು ಅಪರಾಧಗಳಲ್ಲಿ ಕ್ರಮವಾಗಿ ಶೇ 12.76 ಮತ್ತು ಶೇ 7.2 ಹೊಂದಿವೆ.

ಎರಡು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಇತರ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ 2021ರಲ್ಲಿ, ರಾಜಧಾನಿಯಲ್ಲಿ ಅಪಹರಣ (3,948), ಗಂಡನಿಂದ ಕ್ರೌರ್ಯ (4,674) ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ (833) ಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಮಹಿಳೆಯರ ವಿರುದ್ಧದ ಅತಿ ಹೆಚ್ಚು ಅಪರಾಧಗಳ ಪ್ರಕರಣಗಳನ್ನು ವರದಿ ಮಾಡಿದೆ. 2021ರಲ್ಲಿ ದೆಹಲಿಯಲ್ಲಿ ಸರಾಸರಿ ಇಬ್ಬರು ಅಪ್ರಾಪ್ತೆಯರು ಪ್ರತಿದಿನ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಅಂಕಿಅಂಶಗಳು ತೋರಿಸಿವೆ.

ರಾಜಧಾನಿಯಲ್ಲಿ ಗರಿಷ್ಠ ಅಪಹರಣ ಪ್ರಕರಣಗಳು

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ಯ ಇತ್ತೀಚಿನ ವರದಿ ಪ್ರಕಾರ, 5,901 ಪ್ರಕರಣಗಳು ದಾಖಲಾಗುವುದರೊಂದಿಗೆ ಕಳೆದ ವರ್ಷ 19 ಮಹಾನಗರಗಳ ಪೈಕಿ ಅತಿ ಹೆಚ್ಚು ಅಪಹರಣ ಪ್ರಕರಣಗಳು ದೆಹಲಿಯಲ್ಲಿ  ದಾಖಲಾಗಿವೆ. ಇದಲ್ಲದೆ, 2020 ರಲ್ಲಿ 5,475 ಪ್ರಕರಣಗಳು ಮತ್ತು 2019 ರಲ್ಲಿ 4,011 ಅಪಹರಣ ಪ್ರಕರಣಗಳು ದಾಖಲಾಗಿವೆ.

ದೆಹಲಿಯ ಕೊಲೆ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. 2020ರಲ್ಲಿ 461 ಮತ್ತು 2019 ರಲ್ಲಿ 500ಕ್ಕೆ ಹೋಲಿಸಿದರೆ, 2021 ರಲ್ಲಿ 454 ಕೊಲೆ ಪ್ರಕರಣಗಳು ವರದಿಯಾಗಿವೆ ಎಂದು ವರದಿ ತಿಳಿಸಿದೆ.

2021 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ದಾಖಲಾದ ಹೆಚ್ಚಿನ ಕೊಲೆಗಳು ಆಸ್ತಿ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವಾದಗಳದ್ದಾಗಿದೆ. ನಂತರ ಪ್ರೇಮ ಸಂಬಂಧಗಳು, ಅಕ್ರಮ ಸಂಬಂಧಗಳು, ವೈಯಕ್ತಿಕ ದ್ವೇಷ ಅಥವಾ ವೈಯಕ್ತಿಕ ಲಾಭಕ್ಕಾಗಿ ನಡೆದವುಗಳಾಗಿವೆ. ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ವರದಕ್ಷಿಣೆ, ವಾಮಾಚಾರ, ಮಗು/ನರಬಲಿ ಮತ್ತು ಕೋಮು, ಧಾರ್ಮಿಕ ಅಥವಾ ಜಾತಿ ಕಾರಣಗಳಿಗಾಗಿ ಯಾವುದೇ ಕೊಲೆ ನಡೆದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com