ಸೋಶಿಯಲ್ ಮೀಡಿಯಾ ಫ್ರೆಂಡ್ ಜೊತೆ ಚಾಟ್ ಮಾಡುವುದನ್ನು ನಿಲ್ಲಿಸಿದ ಬಾಲಕಿ ಮೇಲೆ ಗುಂಡಿನ ದಾಳಿ!

ದೆಹಲಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ವ್ಯಕ್ತಿಗಳು ಗುಂಡು ಹಾರಿಸಿದ್ದು,  ಎರಡು ದಿನಗಳ ನಂತರ ಆಕೆಯ ಮೇಲೆ ದಾಳಿ ಮಾಡಿದವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ವ್ಯಕ್ತಿಗಳು ಗುಂಡು ಹಾರಿಸಿದ್ದು, ಎರಡು ದಿನಗಳ ನಂತರ ಆಕೆಯ ಮೇಲೆ ದಾಳಿ ಮಾಡಿದವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ತನ್ನೊಂದಿಗೆ ಸ್ನೇಹ ಬೆಳೆಸಿದ ಆರೋಪಿಗಳಲ್ಲಿ ಒಬ್ಬನ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದರಿಂದ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ.

ಬಾಲಕಿ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ ನಂತರ ಅರ್ಮಾನ್ ಅಲಿ ಎಂಬಾತ ದಾಳಿ ಮಾಡಲು ಯೋಜಿಸಿದ್ದಾಗಿ ಬಾಬಿ ಮತ್ತು ಪವನ್ ಎಂಬ ಇಬ್ಬರು ವ್ಯಕ್ತಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಸದ್ಯ ಪ್ರಮುಖ ಆರೋಪಿ ಅರ್ಮಾನ್ ಅಲಿ ಪರಾರಿಯಾಗಿದ್ದು, ಆತನನ್ನು ಪತ್ತೆಹಚ್ಚಲು ಪೊಲೀಸರು ಮಾಹಿತಿದಾರರ ಸಹಾಯವನ್ನು ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಅರ್ಮಾನ್ ಅಲಿ ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಮಾಧ್ಯಮದ ಮೂಲಕ ಹುಡುಗಿಯೊಂದಿಗೆ ಸಂಪರ್ಕದಲ್ಲಿದ್ದನು. ಆರು ತಿಂಗಳ ಹಿಂದೆ ಹುಡುಗಿ ತನ್ನ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ ನಂತರ ಆತ ದಾಳಿಗೆ ಸಂಚು ರೂಪಿಸಿದ್ದ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹನ್ನೊಂದನೇ ತರಗತಿ ಓದುತ್ತಿರುವ 16 ವರ್ಷದ ಬಾಲಕಿ ಗುರುವಾರ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಆಕೆಯ ಮೇಲೆ ಗುಂಡು ಹಾರಿಸಲಾಗಿದೆ. ಸಂತ್ರಸ್ತೆಗೆ ಭುಜದ ಮೇಲೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳು ಬಾಲಕಿಯ ಮೇಲೆ ಹಿಂದಿನಿಂದ ಗುಂಡು ಹಾರಿಸಿ ಓಡಿ ಹೋಗಿದ್ದಾರೆ. ಅವರ ವಿರುದ್ಧ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com