ಚಿತ್ರದುರ್ಗ: ಮುರುಘಾ ಮಠದಿಂದ ಮತ್ತಿಬ್ಬರು ವಿದ್ಯಾರ್ಥಿಗಳು ನಾಪತ್ತೆ, ದೂರು ದಾಖಲು
ಚಿತ್ರದುರ್ಗ: ಲೈಂಗಿಕ ಕಿರುಕುಳದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿ ಕಾನೂನು ಹೋರಾಟ ನಡೆಸುತ್ತಿರುವ ಮುರುಘಾ ಶ್ರೀಗಳಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಮಠದ ಶಾಲೆಯಲ್ಲಿ ಓದುತ್ತಿದ್ದ ಕಲಬುರಗಿಯ 11 ವರ್ಷದ ಹಾಗೂ ಕೊಪ್ಪಳದ 13 ವರ್ಷದ ಬಾಲಕ ಸೆ.8ರಂದು ನಾಪತ್ತೆಯಾಗಿದ್ದಾರೆ. ಇವರು ಮಠದ SJM ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳು ಮಠದ ಅಧೀನದ ಜಯದೇವ ಹಾಸ್ಟೆಲ್‌ನಲ್ಲಿ ಇದ್ದರು. ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ಸಂಜೆ ಹಾಸ್ಟೆಲ್‌ಗೆ ಬಂದಿಲ್ಲ. ಈ ಬಗ್ಗೆ ಹಾಸ್ಟೆಲ್ ಸಿಬ್ಬಂದಿ ವಿಚಾರಿಸಿದ್ದಾರೆ. ವಿದ್ಯಾರ್ಥಿಗಳು ಶಾಲೆಗೂ ಹೋಗದೇ, ಹಾಸ್ಟೆಲ್‌ಗೂ ಬಾರದೇ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಈ ಕುರಿತು ಹಾಸ್ಟೆಲ್ ಸಿಬ್ಬಂದಿ, ಪೋಷಕರ ಗಮನಕ್ಕೆ ತಂದಿದ್ದು, ಮಕ್ಕಳು ಮನೆಗೂ ಬಂದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ಪೋಷಕರ ಸೂಚನೆ ಮೇರೆಗೆ ಹಾಸ್ಟೆಲ್ ಸಿಬ್ಬಂದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಠದ ಜಯದೇವ ಹಾಸ್ಟೆಲ್‌ನಲ್ಲಿ ವಾಸವಿದ್ದ ಇಬ್ಬರು ವಿದ್ಯಾರ್ಥಿಗಳು 2022ರ ಸೆ.8ರಂದು ಬೆಳಗ್ಗೆ 8.20ರಿಂದ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಹಾಸ್ಟೆಲ್ ವಾರ್ಡನ್ ಮಲ್ಲೇಶ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಶಾಲೆ ಮುಗಿದ ನಂತರ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಹಿಂತಿರುಗಲಿಲ್ಲ. ನಂತರ ವಿದ್ಯಾರ್ಥಿಗಳು ಶಾಲೆಗೆ ಹೋಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದೇ ದಿನ ಸಂಜೆ ಅವರ ಪೋಷಕರಿಗೆ ಮಾಹಿತಿ ನೀಡಲಾಯಿತು. ಎರಡ್ಮೂರು ದಿನ ಕಳೆದರೂ ವಿದ್ಯಾರ್ಥಿಗಳು ಹಿಂತಿರುಗದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ