ವಿಧಾನಸಭೆ: ಕಳೆದ 50 ವರ್ಷಗಳಲ್ಲಿಯೇ ದಾಖಲೆ ಮಳೆ; ಅಪಾರ ಪ್ರಮಾಣದ ಬೆಳೆ ನಾಶ; ಅತಿವೃಷ್ಟಿ ಹಾನಿ ಬಗ್ಗೆ ಆರ್. ಅಶೋಕ್ ಮಾಹಿತಿ

ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರೆಗಳು ಮತ್ತು ಜಲಾಶಯಗಳು ತುಂಬಿ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸೋಮವಾರ ವಿಧಾನಸಭೆಗೆ ತಿಳಿಸಿದರು.
ಆರ್.ಅಶೋಕ್
ಆರ್.ಅಶೋಕ್
Updated on

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರೆಗಳು ಮತ್ತು ಜಲಾಶಯಗಳು ತುಂಬಿ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸೋಮವಾರ ವಿಧಾನಸಭೆಗೆ ತಿಳಿಸಿದರು.

ಮತ್ತೊಂದೆಡೆ, ಮಳೆ ಮತ್ತು ಪ್ರವಾಹದಲ್ಲಿ 8.91 ಲಕ್ಷ ಹೆಕ್ಟೇರ್‌ನಲ್ಲಿನ ಬೆಳೆಗಳು ಹಾನಿಗೊಳಗಾಗಿವೆ, ಮಳೆ ಪ್ರವಾಹಕ್ಕೆ ಹಲವರು ಸಾವನ್ನಪ್ಪಿದ್ದಾರೆ,  ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಅಶೋಕ ಹೇಳಿದರು.

ಅತಿವೃಷ್ಟಿ ಬಗ್ಗೆ ಮಾತು ಮುಂದುವರಿಸಿದ ಸಚಿವ ಅಶೋಕ್ ಅವರು, ರಾಜ್ಯದಲ್ಲಿ ಜುಲೈನಿಂದ ಸೆಪ್ಟೆಂಬರ್ ನಡುವೆ ನಾಲ್ಕು ಹಂತದಲ್ಲಿ ಭಾರಿ ಮಳೆಯಾಗಿದೆ. ಇದರಿಂದ 8,91,187 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. 127 ಜನ ಸಾವನ್ನಪ್ಪಿದ್ದಾರೆ. 1289 ಜಾನುವಾರುಗಳು, 1,53,413 ಕೋಳಿಗಳು ಸಾವನ್ನಪ್ಪಿವೆ. ಹಾಗೂ 45,465 ಮನೆಗಳಿಗೆ ಹಾನಿಯಾಗಿದೆ ಎಂದರು.

ಜುಲೈ ತಿಂಗಳಿನಿಂದ ಸೆ.12ರ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು,  ತೀವ್ರತರ ಮಳೆಯಿಂದಾಗಿ ರಾಜ್ಯದಲ್ಲಿ 45,465 ಮನೆಗಳು ಹಾನಿಗೀಡಾಗಿವೆ. ಈ ಪೈಕಿ ಸುಮಾರು 2438 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 14976 ಮನೆಗಳ ತೀವ್ರ ಹಾನಿ ಮತ್ತು 28,051 ಮನೆಗಳು ಭಾಗಶಃ ಹಾನಿಯಾಗಿವೆ.

ಕೃಷಿ ಭೂಮಿಯಲ್ಲಿ ಹೆಚ್ಚಿನ ತೇವಾಂಶ, ವಾರಗಟ್ಟಲೆ ನಿಂತ ನೀರು ಮತ್ತು ಪ್ರವಾಹದಿಂದ 8,91,187 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿ ಮತ್ತು ಸುಮಾರು 1,03,254 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ನಷ್ಟವಾಗಿದೆ ಎಂದು ವಿವರಿಸಿದರು.

ಪ್ರವಾಹ ಪರಿಸ್ಥಿತಿಯಿಂದಾಗಿ 27,648 ಕಿ.ಮೀ. ಉದ್ದದ ರಸ್ತೆ, 2325 ಸೇತುವೆ, 8627 ಶಾಲಾ ಕೊಠಡಿಗಳು, 269 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5194 ಅಂಗನವಾಡಿ ಕೇಂದ್ರಗಳು ಮತ್ತು ಗ್ರಾಮಪಂಚಾಯಿತಿಗಳ ಆಸ್ತಿಗಳಿಗೆ ಹಾನಿಯಾಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಿದ್ಯುತ್‌ ಸಂಪರ್ಕಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಸುಮಾರು 33,475 ವಿದ್ಯುತ್‌ ಕಂಬಗಳು, 3508 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಂಡಿದ್ದು ಮತ್ತು 4136 ಕಿ.ಮೀ. ಉದ್ದದ ವಿದ್ಯುತ್‌ ಸಂಪರ್ಕದ ತಂತಿ ಹಾಳಾಗಿದೆ ಎಂದು ವಿವರಣೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ, ಈ ಕ್ರಮವನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ. ಇದೇ ಮಾದರಿಯನ್ನು ಇತರ ರಾಜ್ಯಗಳಲ್ಲೂ ಅಳವಡಿಸುವ ನಿರೀಕ್ಷೆ ಇದೆ,’’ ಎಂದು ಅವರು ಹೇಳಿದರು.

ಕಳೆದ ಜೂನ್ ತಿಂಗಳಿನಿಂದ ಇದುವರೆಗೆ 425 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದ್ದು, ಕಳೆದ ಐವತ್ತು ವರ್ಷಗಳಲ್ಲೇ ಇದು ದಾಖಲೆ ಎಂದು ಹೇಳಿದರು. ಕರ್ನಾಟಕದ ಕಾವೇರಿ‌ ನದಿ ಪಾತ್ರದಿಂದ ತಮಿಳುನಾಡಿಗೆ ನೀರು ಹರಿದು ಹೋಗಿದ್ದಕ್ಕೆ ಬಿಳಿಗುಂಡ್ಲು ಜಲಾಶಯವೇ ಮಾಪನ ಕೇಂದ್ರ. ಈ ಕೇಂದ್ರದಲ್ಲಿ ದಾಖಲಾಗಿರುವ ನೀರಿನ ಪ್ರಮಾಣ 425 ಟಿಎಂಸಿ ಎಂದು ಹೇಳಿದರು.

1974 ರ ಕಾವೇರಿ ಒಪ್ಪಂದದ ನಂತರ ಈ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗಿರಲಿಲ್ಲ. ಇದು ಸಾರ್ವಕಾಲಿಕ ದಾಖಲೆ. ಈ ರೀತಿ ತಮಿಳುನಾಡಿಗೆ 425 ಟಿಎಂಸಿ ನೀರು ಹರಿದು ಹೋದ ನಂತರವೂ ಕರ್ನಾಟಕದ ಕಾವೇರಿ ನದಿ ಪಾತ್ರದ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ 48 ಟಿಎಂಸಿಯಷ್ಟು ನೀರು ಸಂಗ್ರಹವಿದ್ದು, ಕಬಿನಿ ಜಲಾಶಯದಲ್ಲಿ ಹದಿನೆಂಟು ಟಿಎಂಸಿಯಷ್ಟು ನೀರು ಸಂಗ್ರಹ ಇದೆ ಎಂದು ಇದೇ ವೇಳೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com