ಮತಾಂತರ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಮತ್ತೆ ಅಂಗೀಕಾರ, ಮೇ 17 ರಿಂದಲೇ ಜಾರಿ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಅಥವಾ ಮತಾಂತರ ನಿಷೇಧ ವಿಧೇಯಕವನ್ನು ಸಣ್ಣ ತಿದ್ದುಪಡಿಯೊಂದಿಗೆ ಬುಧವಾರ ವಿಧಾನಸಭೆಯಲ್ಲಿ ಮತ್ತೆ ಅಂಗೀಕರಿಸಲಾಗಿದೆ.
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ
Updated on

ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಅಥವಾ ಮತಾಂತರ ನಿಷೇಧ ವಿಧೇಯಕವನ್ನು ಸಣ್ಣ ತಿದ್ದುಪಡಿಯೊಂದಿಗೆ ಬುಧವಾರ ವಿಧಾನಸಭೆಯಲ್ಲಿ ಮತ್ತೆ ಅಂಗೀಕರಿಸಲಾಗಿದೆ.

ಕಳೆದ ಗುರುವಾರ ವಿಧಾನ ಪರಿಷತ್ ನಲ್ಲಿ ಅಂಗೀಕಾರಗೊಂಡಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ತಿದ್ದುಪಡಿಯೊಂದಿಗೆ ಮರುಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವಿಧಾನಸಭೆಯಲ್ಲಿ ಮಂಡಿಸಿದರು.

ವಿಧೇಯಕ ಮಂಡಿಸಿ ಮಾತನಾಡಿದ ಅರಗ ಜ್ಞಾನೇಂದ್ರ ಅವರು, ಕಳೆದ ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದೆ. ಅದು ಕೌನ್ಸಿಲ್‌ನಲ್ಲಿ ಬಾಕಿ ಉಳಿದಿತ್ತು. ಆದ್ದರಿಂದ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಈಗ ಸುಗ್ರೀವಾಜ್ಞೆಗೆ ಬದಲು ಮಸೂದೆಯನ್ನು ಮಂಡಿಸಲಾಗುತ್ತಿದೆ. ಮೇ 17, 2022 ರಿಂದ ಕಾನೂನು ಜಾರಿಗೆ ಬಂದಿದೆ ಎಂಬ ಸಣ್ಣ ತಿದ್ದುಪಡಿಯೊಂದಿಗೆ ವಿಧಾನ ಪರಿಷತ್ ನಲ್ಲಿ ಅಂಗೀಕಾರಗೊಂಡ ನಂತರ ಮಸೂದೆ ಮತ್ತೆ ವಿಧಾನಸಭೆಗೆ ಬಂದಿದೆ ಎಂದರು.

ಮತಾಂತರ ನಿಷೇಧ ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ ನೀಡಿದ ನಂತರ, ಸುಗ್ರೀವಾಜ್ಞೆಯನ್ನು ಪ್ರಕಟಿಸಿದ ದಿನಾಂಕವಾದ ಮೇ 17, 2022 ರಿಂದ ಕಾನೂನು ಜಾರಿಗೆ ಬಂದಿದೆ ಎಂದರು.

ಮಸೂದೆ ಮೇಲಿನ ಚರ್ಚೆಯ ವೇಳೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಸಂವಿಧಾನ ವಿರೋಧಿ ಮಸೂದೆ, ದುರುದ್ದೇಶದಿಂದ ಕೂಡಿದೆ. ಕಾನೂನಾತ್ಮಕವಾಗಿ ಹೋರಾಡಿದರೆ ಮಸೂದೆಗೆ ತಡೆ ಸಿಗಲಿದೆ ಎಂದರು.

ಕಾಂಗ್ರೆಸ್ ಶಾಸಕರು ಮಸೂದೆ ವಿರೋಧಿಸಿ ಸಭಾತ್ಯಾಗ ಮಾಡಿದರೂ. ಸಭಾತ್ಯಾಗದ ನಡುವೆಯೇ ವಿಧಾನಸಭೆಯಲ್ಲಿ ಮಸೂದೆಯನ್ನು ತಿದ್ದುಪಡಿಯೊಂದಿಗೆ ಅಂಗೀಕರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com