ಪಿಎಸ್ ಐ ನೇಮಕಾತಿ ಹಗರಣ: ಪ್ರಾಮಾಣಿಕ- ಅಮಾಯಕ ಅಭ್ಯರ್ಥಿಗಳನ್ನು ರಕ್ಷಿಸಬೇಕು; ಸಿದ್ದರಾಮಯ್ಯ ,ಎಚ್ ಡಿಕೆ ಆಗ್ರಹ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು, ಜೊತೆಗೆ ಸರ್ಕಾರವು ಅಮಾಯಕ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡುವಂತೆ ಸೂಚಿಸಿದರು.
ಎಚ್.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಎಚ್.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
Updated on

ಬೆಂಗಳೂರು:  545 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳ (ಪಿಎಸ್‌ಐ) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣ ಮಂಗಳವಾರ ವಿಧಾನಸಭೆಯಲ್ಲ ಕೋಲಾಹಲದ  ಸೃಷ್ಟಿಸಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು, ಜೊತೆಗೆ ಸರ್ಕಾರವು ಅಮಾಯಕ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡುವಂತೆ ಸೂಚಿಸಿದರು.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ತೇರ್ಗಡೆಯಾಗಿರುವ ಅಮಾಯಕಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಪರೀಕ್ಷೆಯಲ್ಲಿ ಅಕ್ರಮ ಮಾಡಿದವರು ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳು, ತಪ್ಪೆಸಗಿದ ಅಭ್ಯರ್ಥಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಅನ್ಯಾಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

ಪಿಎಸ್ಐ ಪರೀಕ್ಷೆ ಹಗರಣದಲ್ಲಿ ಬಂಧನಕ್ಕೊಳಗಾದ ಎಡಿಜಿಪಿ ಅಮೃತ್ ಪೌಲ್ ಗೆ ಮಂಪರು ಪರೀಕ್ಷೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಶಾಸಕ ಬಸವರಾಜ ದಡೇಸಗೂರ್ ಅವರ ಮಾತು ಸುಳ್ಳೋ ಸತ್ಯವೋ ಎಂಬುದು ಗೊತ್ತಾಗಬೇಕು, ‌ಬಂಧನ ಆಗಿರುವ ಎಡಿಜಿಪಿ ಅಮೃತ್ ಪೌಲ್ ಅವರ ಹೇಳಿಕೆ ಸೆಕ್ಷನ್ 164 ಅಡಿಯಲ್ಲಿ ದಾಖಲಾಗಬೇಕು. ಹಾಗೂ ಎಡಿಜಿಪಿಗೆ ಮಂಪರು ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು. ಮಂಪರು ಪರೀಕ್ಷೆ ಮಾಡಿದಾಗ ಎಲ್ಲ ಹೊರಗಡೆ ಬರುತ್ತೆ ಎಂದರು.

ಪಿಎಸ್ಸೈ ನೇಮಕಾತಿ ಹಗರಣವನ್ನು ಮುಚ್ಚಿಡುವಂತಹ ಯಾವುದೆ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಿಲ್ಲ. ನನಗೆ ಈ ಅಕ್ರಮದ ಕುರಿತು ಮಾಹಿತಿ ಸಿಕ್ಕ ತಕ್ಷಣವೆ ಮುಖ್ಯಮಂತ್ರಿಯ ಅನುಮತಿ ಪಡೆದು ತನಿಖೆಗೆ ಆದೇಶ ಮಾಡಿದ್ದೇನೆ. ಸಿಒಡಿಯವರು ಅತ್ಯಂತ ಪಾರದರ್ಶಕವಾಗಿ ತನಿಖೆ ಮಾಡುತ್ತಿದ್ದು, ಕಾಂಗ್ರೆಸ್‍ನವರ ಆರೋಪದಲ್ಲಿ ಯಾವುದೆ ಹುರುಳಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಪೊಲೀಸ್ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮಾಡುತ್ತಿದ್ದರು. ಈ ಮಧ್ಯೆಯೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ಅಕ್ರಮದ ಕುರಿತು ದಾಖಲಾತಿ ಇದೆ ಎಂದು ಅನಾವಶ್ಯಕವಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಆದರೆ, ದಾಖಲೆ ಮಾತ್ರ ಕೊಡಲಿಲ್ಲ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 97 ಜನರನ್ನು ಬಂಧಿಸಿದ್ದೇವೆ. ಅದರಲ್ಲಿ 48 ಜನ ಅಭ್ಯರ್ಥಿಗಳು, ಎಡಿಜಿಪಿ ಸೇರಿದಂತೆ 22 ಜನ ಪೊಲೀಸರನ್ನು ಬಂಧಿಸಿದ್ದೇವೆ. ಬ್ಲೂಥೂಟ್ ಡಿವೈಸ್ ಕಿಂಗ್‍ಪಿನ್ ಕಾಂಗ್ರೆಸ್ ಕಾರ್ಯಕರ್ತ ಆರ್.ಡಿ.ಪಾಟೀಲ್ ಹಾಗೂ ಆತನ ಸಹಚರರ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಠೇವಣಿಗಳಲ್ಲಿ ಇದ್ದ 8 ಕೋಟಿ ರೂ., 506 ಗ್ರಾಂ ಬಂಗಾರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಿಒಡಿ ತನಿಖೆಯನ್ನು ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.

ಇದೇ ವೇಳೆ ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರ ಕೈವಾಡವಿದೆ ಎಂಬ ವಿಷಯವೂ ಪ್ರಸ್ತಾಪವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಆರೋಪಿಗಳಲ್ಲಿ ಒಬ್ಬರಾದ ಆರ್.ಡಿ.ಪಾಟೀಲ ಕಾಂಗ್ರೆಸ್ ಕಾರ್ಯಕರ್ತ ಎಂದು ಆರೋಪಿಸಿದ ಅವರು, ಕಲಬುರಗಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ ಕಿಂಗ್‌ಪಿನ್ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. ಶಾಸಕ ಪ್ರಿಯಾಂಕ್ ಖರ್ಗೆ ತಮ್ಮ ಮಾತನ್ನು ಮುಗಿಸಲು ಅವಕಾಶ ನೀಡುವಂತೆ ಪದೇ ಪದೇ ಕೋರುತ್ತಿದ್ದರು. ಈ ಸಂದರ್ಭದಲ್ಲಿ ಸ್ಪೀಕರ್ ಕಾಗೇರಿ, ಅವರಿಗೆ ಅವಕಾಶ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com