ಬೆಂಗಳೂರು: ಕೇಂದ್ರ ಸರ್ಕಾರದ ಪ್ರಾಜೆಕ್ಟ್ ಚೀತಾಕ್ಕೂ, ಕರ್ನಾಟಕಕ್ಕೂ ಒಂದು ಬಲವಾದ ನಂಟಿದೆ. ಕಳೆದ ವಾರ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಫ್ರಿಕಾದ ನಮೀಬಿಯಾ ದೇಶದಿಂದ 8 ಚೀತಾಗಳನ್ನು ತಂದು ಸಂಭ್ರಮ ಸಡಗರದಿಂದ ಬಿಡಲಾಗಿತ್ತು. ಈ ಪ್ರಾಜೆಕ್ಟ್ ಚೀತಾದ ಹಿಂದೆ ಕರ್ನಾಟಕದ ಬೆಂಗಳೂರು ಸಂಪರ್ಕವಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿರುವ ನಗರದ ಇಬ್ಬರು ಹಿರಿಯರು ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಚೀತಾಗಳನ್ನು ಬಿಡುಗಡೆ ಮಾಡಿದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇಬ್ಬರು ತಜ್ಞರು ಎಂಟು ಚೀತಾಗಳ ಪ್ರತಿಯೊಂದು ಚಲನವಲನವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಯಾವುದೇ ರೋಗಗಳನ್ನು ಪರೀಕ್ಷಿಸಲು ಅವುಗಳ ಮಲ-ಮೂತ್ರದ ಮಾದರಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಅವುಗಳ ಚಲನವಲನಗಳ ಬಗ್ಗೆ ನಿಗಾ ಇರಿಸಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮಾಜಿ ಪಶುವೈದ್ಯರಾಗಿದ್ದ ಡಾ.ಸನತ್ ಎಂ, 2021 ರಲ್ಲಿ ಪ್ರಾಜೆಕ್ಟ್ ಚೀತಾಗೆ ಸೇರ್ಪಡೆಗೊಳ್ಳುವ ಮೊದಲು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII ) ಮತ್ತು ದೆಹಲಿ ಮೃಗಾಲಯದಲ್ಲಿ ಕೆಲಸ ಮಾಡಿದ್ದರು. ಅವರು ಕುನೊದಲ್ಲಿ WII ತಂಡವನ್ನು ಮುನ್ನಡೆಸುತ್ತಿರುವ ಹಿರಿಯ ಪ್ರಾಜೆಕ್ಟ್ ಅಸೋಸಿಯೇಟ್ ಬಿಪಿನ್ ಸಿ ಎಂ ಜೊತೆಯಲ್ಲಿದ್ದಾರೆ. ಅವರು ಮಂಗಳೂರಿನ ಪುತ್ತೂರಿನ ಚಿನ್ನದ ವ್ಯಾಪಾರಿ ಮುಳಿಯ ಕೇಶವ ಭಟ್ ಅವರ ಪುತ್ರರು.
ಕೊಡಗಿನಲ್ಲಿ ಜನಿಸಿದ ಮತ್ತು ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಬಿಪಿನ್, 2011 ರಲ್ಲಿ ಚೀತಾಗಳ ಮರುಪರಿಚಯಕ್ಕಾಗಿ WII ಪ್ರಾಜೆಕ್ಟ್ ಬಯಾಲಜಿಸ್ಟ್ ಆಗಿ ಸೇರುವ ಮೊದಲು ಪಶ್ಚಿಮ ಘಟ್ಟಗಳಲ್ಲಿನ ಮಾನವ-ಆನೆ ಸಂಘರ್ಷಗಳ ಅಧ್ಯಯನಕ್ಕಾಗಿ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದೊಂದಿಗೆ ಕೆಲಸ ಮಾಡಿದರು.
ಚೀತಾಗಳ ನಡವಳಿಕೆ ಮತ್ತು ಹೊಂದಾಣಿಕೆಯನ್ನು ಮೌಲ್ಯಮಾಪನ ಮಾಡಿದ ತಂಡದ ಸದಸ್ಯರು, ಇಲ್ಲಿಯವರೆಗೆ ಚೀತಾಗಳ ನಡವಳಿಕೆಯು ಸಹಜವಾಗಿದೆ. ನಮೀಬಿಯಾ ಮತ್ತು ಇತರ ಆಫ್ರಿಕನ್ ಪ್ರದೇಶಗಳಿಗಿಂತ ಕುನೊದಲ್ಲಿನ ಹವಾಮಾನವು ಉತ್ತಮವಾಗಿದೆ. ಪ್ರಾಣಿಗಳು ಈಗಾಗಲೇ ವಿಶ್ರಾಂತಿ ಪಡೆಯಲು ಪ್ರಾರಂಭಿಸಿವೆ ಎಂದು ಹೇಳುತ್ತಾರೆ.
ಪ್ರಾಣಿಗಳು ಕೋಡ್ ಐಡಿ ಸಂಖ್ಯೆ ಮತ್ತು ರೇಡಿಯೊ ಕಾಲರ್ ಸಂಖ್ಯೆಯನ್ನು ಹೊಂದಿದ್ದರೂ ಸಹ, ಸುಲಭ ಸಂವಹನಕ್ಕಾಗಿ, ಪ್ರತಿಯೊಂದಕ್ಕೂ ಹೆಸರಿಸಲಾಗಿದೆ. ಪುರುಷ ಚೀತಾಗಳಿಗೆ ಫ್ರೆಡ್ಡಿ, ಎಲ್ಟನ್ ಮತ್ತು ಒಬಾನ್, ಮತ್ತು ಹೆಣ್ಣು ಚೀತಾಗಳಲ್ಲಿ ಒಂದಕ್ಕೆ ಪ್ರಧಾನಿ ಮೋದಿಯವರು ಆಶಾ ಎಂದು, ಸಿಯಾಯಾ, ಟಿಬಿಲಿಸಿ, ಸಾಶಾ ಮತ್ತು ಸವನ್ನಾ ಎಂದು ಹೆಸರಿಡಲಾಗಿದೆ.
Advertisement