ಜನರ ಅನುಕೂಲಕ್ಕೆ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ಕಟ್ಟಿಸಿರುವ ಲೀಲಾವತಿ ಅವರ ಮನಸ್ಸು ದೊಡ್ಡದು: ಸಿಎಂ ಬೊಮ್ಮಾಯಿ

ನಿಮ್ಮ ಮುಖದಲ್ಲಿನ ಕಳೆ ಅತ್ಯಂತ  ಸುಂದರ. ಇಷ್ಟೆಲ್ಲಾ ಅಂದ ಚಂದ ಇರುವ ನಿಮಗೆ ಅದಕ್ಕಿಂತಲೂ ಅಂದವಾಗಿರುವ ಮನಸ್ಸಿದೆ. ಇಲ್ಲಿ ಜನರಿಗೆ ಅನುಕೂಲವಾಗಲಿ ಎಂದು ಶಾಶ್ವತವಾಗಿ ಆಸ್ಪತ್ರೆ ಕಟ್ಟಿಸಿಕೊಟ್ಟಿರುವ ನಿಮ್ಮ ಮನಸ್ಸು ದೊಡ್ಡದು..
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ನಿಮ್ಮ ಮುಖದಲ್ಲಿನ ಕಳೆ ಅತ್ಯಂತ  ಸುಂದರ. ಇಷ್ಟೆಲ್ಲಾ ಅಂದ ಚಂದ ಇರುವ ನಿಮಗೆ ಅದಕ್ಕಿಂತಲೂ ಅಂದವಾಗಿರುವ ಮನಸ್ಸಿದೆ. ಇಲ್ಲಿ ಜನರಿಗೆ ಅನುಕೂಲವಾಗಲಿ ಎಂದು ಶಾಶ್ವತವಾಗಿ ಆಸ್ಪತ್ರೆ ಕಟ್ಟಿಸಿಕೊಟ್ಟಿರುವ ನಿಮ್ಮ ಮನಸ್ಸು ದೊಡ್ಡದು ಎಂದು ಕನ್ನಡ ಚಿತ್ರರಂಗದ ಹಿರಿಯ ನಟಿ  ಡಾ. ಎಂ. ಲೀಲಾವತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಗಳಿದ್ದಾರೆ.

ಅವರು ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ಇಂದು ಡಾ. ಎಂ. ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಚಿತ್ರಜಗತ್ತಿನ ಚಿರಸ್ಥಾಯಿ ತಾರೆ. ಎವರ್ ಗ್ರೀನ್ ಸ್ಟಾರ್ ಲೀಲಾವತಿ ಅವರು ಎಲ್ಲರಿಗೂ ಅಕ್ಕ. ಲೀಲಾವತಿ ಅವರು ಅಭಿನಯಿಸಿರುವ  ಚಿತ್ರಗಳನ್ನೂ ನೋಡದೇ ಇರುವವರು ಕರ್ನಾಟಕದಲ್ಲಿ ಬಹಳ ಕಡಿಮೆ. ಅವರದ್ದು ಅದ್ಭುತವಾದ ಅಭಿನಯ. ಚಲನಚಿತ್ರದಲ್ಲಿ ಬಹಳ ದಿನ ತಾರೆಯಾಗಿ ಉಳಿಯುವುದು ಕಷ್ಟ. ಆದರೆ ನಿರಂತರವಾಗಿ ಹಲವಾರು ಸವಾಲುಗಳನ್ನು ಎದುರಿಸಿ, ಅಷ್ಟೇ ಸಮಾಧಾನದಿಂದ ಸಕಲರ ಲೇಸು ಬಯಸುವ ದೊಡ್ಡ ಗುಣ ಹೊಂದಿರುವ ಲೀಲಾವತಿಯವರು ಸೋಲದೇವನಹಳ್ಳಿಯಲ್ಲಿ ನೆಲೆಸಿರುವುದು ದೇವರೇ ಅವನ ಪರವಾಗಿ ಕಳುಹಿಸಿಕೊಟ್ಟಂತಿದೆ ಎಂದರು.

ದೂರದ ಶಾಂತ ಪ್ರದೇಶವಾದ, ನಿಸರ್ಗ ಸಂಪತ್ತಿರುವ ಈ ಸ್ಥಳದಲ್ಲಿ ತಮ್ಮ ತೋಟವನ್ನು ಲೀಲಾವತಿಯವರು ಮಾಡಿಕೊಂಡಿದ್ದಾರೆ. ದೊಡ್ಡಆತ್ಮಶಕ್ತಿ ಅವರಲ್ಲಿದೆ. ಅಸಾಧ್ಯವಾದುದನ್ನು ಮಾಡಿ ಸಾಧಿಸಿದ್ದಾರೆ. ಅಸಾಧ್ಯವಾದುದನ್ನು ಮಾಡಿದರೆ ಸಾಧನೆ ಆಗುವುದು ಎಂದರು.

ಮೇರು ಕಲಾವಿದೆ
ಲೀಲಾವತಿ ಅವರ ಅಭಿನಯದ ಸಿನಿಮಾಗಳನ್ನು ನೋಡಿದರೆ, ಅವರಿಗೆ ಸರಿಸಾಟಿ ಯಾರೂ ಇಲ್ಲ. ಅವರ ನಟನೆ ಮನೋಜ್ಞವಾದುದು. ಯಾವ ಪಾತ್ರವಾದರೂ ಪರಕಾಯಪ್ರವೇಶ ಮಾಡಿ ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ನೀಡಿರುವ ಮೇರು ಕಲಾವಿದೆ ಎಂದರು.

ಹೃದಯ ಶ್ರೀಮಂತಿಕೆ
ನೆಲಮಂಗಲದಲ್ಲಿ ಎಷ್ಟು  ಜನ ಶ್ರೀಮಂತರಿರಬಹುದು, ಆದರೆ ಯಾರೂ ಆಸ್ಪತ್ರೆ, ಶಾಲೆ ಕಟ್ಟಿಸಬೇಕೆಂದು ವಿಚಾರ ಮಾಡಿರಲಿಲ್ಲ. ತಾಯಿ ಲೀಲಾವತಿಯವರು ಇದನ್ನು ಕಟ್ಟಿಸಿ ಅವರ ಹೃದಯ ಶ್ರೀಮಂತಿಕೆ ತೋರುವುದರ ಜೊತೆಗೆ ನಾವೆಲ್ಲಾ ಎಷ್ಟು ಸಣ್ಣವರೆಂದೂ ತೋರಿಸಿದ್ದಾರೆ. ಆಸ್ಪತ್ರೆಯಲ್ಲಿ ಬಡವರಿಗೆ, ಬಡ ಮಕ್ಕಳಿಗೆ ಚಿಕಿತ್ಸೆ ಸಿಗಬೇಕು ಎಂದು ಸರ್ಕಾರಗಳು ಮಾಡಬೇಕಿರುವ ಕೆಲಸ ಮಾಡಿದ್ದೀರಿ. ಇಂಥ ಕಾರ್ಯಕ್ರಮಕ್ಕೆ ನಾನು ಬರದೇ ಹೋದರೆ ನನ್ನ ಕರ್ತವ್ಯಕ್ಕೆ ಚ್ಯುತಿಯಾಗುತ್ತಿತ್ತು. ಈ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಯಾಗಬೇಕು. ಅದನ್ನು ಖಂಡಿತವಾಗಿ ಮಾಡುವುದಲ್ಲದೆ, ವೈದ್ಯರ ನೇಮಕಾತಿ ಮುಂತಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಪಶುಚಿಕಿತ್ಸಾಲಯ ಮಂಜೂರು ಮಾಡಲಾಗುವುದು
ಸಮಾಜದಿಂದ ಪಡೆದಿದ್ದನ್ನು ಇಲ್ಲಿನ ಸಮಾಜಕ್ಕೆ ಬಿಟ್ಟು ಹೋದರೆ ನಮ್ಮ ಬದುಕಿನ ಬ್ಯಾಲೆನ್ಸ್ ಶೀಟ್ ಸರಿದೂಗುತ್ತದೆ. ಪಶು ಚಿಕಿತ್ಸಾಲಯವನ್ನೂ ಕಟ್ಟಿಸಿಕೊಡುವುದಾಗಿ ಹೇಳುವ ಲೀಲಾವತಿಯವರ ಕೊಡಬೇಕೆನ್ನುವ ಹಂಬಲ ಅಪರೂಪದ್ದು. ಬಹಳ ಜನ ಬೇಡುವವರಿದ್ದಾರೆ. ಕೊಡಬೇಕೆನ್ನುವವರು ವಿರಳ. ನೀಡುವವರು ಎಂದಿಗೂ ಶ್ರೀಮಂತರು. ಕೊಟ್ಟಿದ್ದು  ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದು ಸರ್ವಜ್ಞ ಹೇಳಿದ್ದಾನೆ. ಅದನ್ನು ಲೀಲಾವತಿ ಅವರು ನಿಜ ಮಾಡಿ ತೋರಿಸಿದ್ದಾರೆ. ಲೀಲಾವತಿಯವರ ಬದುಕು ಅನುಕರಣೀಯ. ಲೀಲಾವತಿಯವರ ಬೇಡಿಕೆಯಂತೆ ಇಲ್ಲಿಗೆ ಖಂಡಿತವಾಗಿಯೂ ಪಶುಚಿಕಿತ್ಸಾಲಯವನ್ನೂ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com