ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರವು ಅವರ ಗೌರವಾರ್ಥ ಆಯೋಜಿಸಿದ್ದ ನಾಗರಿಕ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರವು ಅವರ ಗೌರವಾರ್ಥ ಆಯೋಜಿಸಿದ್ದ ನಾಗರಿಕ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದರು.

ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಪರಿವರ್ತಿಸುವಲ್ಲಿ ಕರ್ನಾಟಕ ಪಾತ್ರ ಮುಖ್ಯವಾಗಿದೆ: ರಾಷ್ಟ್ರಪತಿ ಮುರ್ಮು

ಭಾರತ ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸುವಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published on

ಬೆಂಗಳೂರು: ಭಾರತ ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸುವಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಕೈಗಾರಿಕಾ ಅಭಿವೃದ್ಧಿಗೆ ಉತ್ತಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿರುವ ರಾಜ್ಯದ ದೂರದೃಷ್ಟಿಯ ರಾಜಕಾರಣಿಗಳು, ಉದ್ಯಮಿಗಳು ಉದ್ಯಮಿಗಳನ್ನು ವಿಶೇಷವಾಗಿ ಸ್ಟಾರ್ಟ್-ಅಪ್ ಗಳಿಗೆ ನೀಡುತ್ತಿರುವ ಪ್ರೋತ್ಸಾಹ, ಬೆಂಬಲವನ್ನು ಸ್ವಾಗತಿಸಿದರು. 

ಆಧುನಿಕ ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಿದೆ, ಜೈವಿಕ ತಂತ್ರಜ್ಞಾನ, ಹೆವಿ ಇಂಜಿನಿಯರಿಂಗ್, ವಾಯುಯಾನ, ಸಂಶೋಧನೆ ಮತ್ತು ಅಭಿವೃದ್ಧಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದರು.

ಕರ್ನಾಟಕ ರಾಜ್ಯವು ನಮ್ಮ ದೇಶದ ಪ್ರಮುಖ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವಾಗಿ ಅಮೂಲ್ಯ ಕೊಡುಗೆಯನ್ನು ನೀಡುತ್ತಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಭಾರತದ ಖ್ಯಾತಿಯನ್ನು ಹೆಚ್ಚಿಸಲು ಕರ್ನಾಟಕಕ್ಕೆ, ವಿಶೇಷವಾಗಿ ಸಿಲಿಕಾನ್ ಸಿಟಿ - ಬೆಂಗಳೂರಿಗೆ ಬಹಳಷ್ಟು ಶ್ರೇಯಸ್ಸು ಸಲ್ಲುತ್ತದೆ ಎಂದು ಅವರು ಹೇಳಿದರು.

ನಿನ್ನೆ ವಿಧಾನಸೌಧದಲ್ಲಿ ರಾಜ್ಯ ಸರ್ಕಾರ ಅವರ ಗೌರವಾರ್ಥವಾಗಿ ಆಯೋಜಿಸಿದ್ದ ನಾಗರಿಕ ಸತ್ಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಅಲೋಕ್ ಆರಾಧೆ, ಅಧ್ಯಕ್ಷರು ಮತ್ತು ಸ್ಪೀಕರ್, ಕರ್ನಾಟಕ ವಿಧಾನ ಪರಿಷತ್ತು ಮತ್ತು ಅಸೆಂಬ್ಲಿ ಸದಸ್ಯರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಷ್ಟ್ರಪತಿಗಳನ್ನು ಪರಿಚಯಿಸುವಾಗ ಅವರ ಸರಳತೆ ಬಗ್ಗೆ ಪ್ರಶಂಸಿಸಿದರು. ಅದಕ್ಕೆ ದ್ರೌಪದಿ ಮುರ್ಮು, ನಾನು ಸರಳವಾಗಿದ್ದೇನೆಯೋ, ಇಲ್ಲವೋ ಗೊತ್ತಿಲ್ಲ, ನಾನು ಎಂದೆಂದಿಗೂ ನಿಮ್ಮ ಸೇವೆಯಲ್ಲಿ ಮುಂದುವರಿಯುತ್ತೇನೆ, ನನಗೆ ಜನಸೇವೆ ಸದಾ ಖುಷಿಕೊಡುತ್ತದೆ ಎಂದರು. 

ಸ್ವಾತಂತ್ರ್ಯ ಹೋರಾಟ, ಆಧ್ಯಾತ್ಮ, ತತ್ವಜ್ಞಾನ, ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ, ವಾಸ್ತುಶಿಲ್ಪ ಹೀಗೆ ಕರ್ನಾಟಕದ ಕೊಡುಗೆಗಳನ್ನು ಸ್ಮರಿಸಿದ ರಾಷ್ಟ್ರಪತಿಗಳು, ಹಂಪಿಯ ಅವಶೇಷಗಳು ಮತ್ತು ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬೇಲೂರು, ಹಳೇಬೀಡು, ಸೋಮನಾಥಪುರ, ಮೈಸೂರು ಮುಂತಾದ ಸ್ಥಳಗಳು ಅತ್ಯುತ್ತಮವಾಗಿವೆ ಎಂದರು.

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಪರಂಪರೆಯ ತಾಣಗಳಿಗೆ ಕರ್ನಾಟಕ ನೆಲೆವೀಡು ಎಂದರು. ಕರ್ನಾಟಕದ ಶ್ರೀಗಂಧದ ಸುಗಂಧವು ಇಡೀ ದೇಶ ಮತ್ತು ಜಗತ್ತನ್ನು ಸೂಸುವಂತೆ, ಕರ್ನಾಟಕದ ಜನರ ಮಧುರ ಸ್ವಭಾವವನ್ನು ದೇಶ ಮತ್ತು ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತದೆ ಎಂದರು. ಕನ್ನಡಿಗರು ಶಾಂತಿ-ಪ್ರೇಮಿಗಳು, ಉದಾರತೆ ಮತ್ತು ಪ್ರೀತಿಯಿಂದ ಆದರ್ಶಪ್ರಾಯರಾಗಿದ್ದಾರೆ ಎಂದು ರಾಷ್ಟ್ರಪತಿಗಳು ಕನ್ನಡನಾಡನ್ನು ಕೊಂಡಾಡಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com