ನನ್ನದು ಗಾಂಧಿ ಮಾರ್ಗ, ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವ ಪಕ್ಷಕ್ಕೆ ನೆತ್ತರ ದಾರಿ ರಾಜಮಾರ್ಗ: ಎಚ್.ಡಿ. ಕುಮಾರಸ್ವಾಮಿ
ಅಗಸ್ಟ್ 5ರೊಳಗೆ ನೈಜ ಕೊಲೆಗೆಡುಕರನ್ನು ಬಂಧಿಸದಿದ್ದರೆ, ನಾನು ಶಾಂತಿಯುತ ಸತ್ಯಾಗ್ರಹ ಕೂರುವುದು ಶತಃಸಿದ್ಧ. ನನ್ನದು ಗಾಂಧಿ ಮಾರ್ಗ. ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವ ಪಕ್ಷಕ್ಕೆ ನೆತ್ತರ ದಾರಿಯೇ ರಾಜಮಾರ್ಗ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Published: 02nd August 2022 11:59 AM | Last Updated: 05th November 2022 01:06 PM | A+A A-

ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಮಂಗಳೂರಿನಲ್ಲಿ ನಿನ್ನೆ ಹೇಳಿದಂತೆ, ಅಗಸ್ಟ್ 5ರೊಳಗೆ ನೈಜ ಕೊಲೆಗೆಡುಕರನ್ನು ಬಂಧಿಸದಿದ್ದರೆ, ನಾನು ಶಾಂತಿಯುತ ಸತ್ಯಾಗ್ರಹ ಕೂರುವುದು ಶತಃಸಿದ್ಧ. ನನ್ನದು ಗಾಂಧಿ ಮಾರ್ಗ. ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವ ಪಕ್ಷಕ್ಕೆ ನೆತ್ತರ ದಾರಿಯೇ ರಾಜಮಾರ್ಗ ಎನ್ನುವುದು ಕರಾವಳಿ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 'ಕರಾವಳಿಯಲ್ಲಿ ನಡೆದ ತ್ರಿವಳಿಕೊಲೆಗಳ ಗುಟ್ಟನ್ನು ಬೇಧಿಸಿ ನೈಜ ಹಂತಕರನ್ನು ಹಿಡಿಯುವ ಬದಲು ರಾಜ್ಯ ಬಿಜೆಪಿ ಸರ್ಕಾರವು, ತಾನೇ ಮುಂದೆ ನಿಂತು ದಿನಕ್ಕೊಂದು ಕಥೆ ಕಟ್ಟುತ್ತಿದೆ. ಕ್ಷಣಕ್ಕೊಂದು ಟ್ವಿಸ್ಟ್ ಕೊಡುತ್ತಾ, ಜನರಿಗೆ ಸತ್ಯ ತಿಳಿಸುತ್ತಿಲ್ಲ. ಕಂಗೊಳಿಸುತ್ತಿದ್ದ ಕರಾವಳಿಯಲ್ಲಿ ಬಡ ಕುಟುಂಬಗಳ ಯುವಕರನ್ನು ರಾಜಕೀಯ ದುರ್ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳೂ ಕ್ರಿಯಾಶೀಲ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿವೆ' ಎಂದು ದೂರಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಪಕ್ಷಪಾತ ನೀತಿ ಕಣ್ಣಿಗೆ ರಾಚುವಂತಿದೆ. ಇದು ಅತ್ಯಂತ ಮಾರಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡವಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಈಗೇನೋ ಜ್ಞಾನೋದಯವಾಗಿ ಮಸೂದ್ ಮತ್ತು ಫಾಝಿಲ್ ಮನೆಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ' ಎಂದು ಕಿಡಿಕಾರಿದ್ದಾರೆ.