ಎಂಪೇರಿಕಲ್ ಡೇಟಾ ಆಧಾರದ ಮೇಲೆ ಮೀಸಲಾತಿ ಪ್ರಕಟ: ಆರೋಪಗಳಿಗೆ ಸರಕಾರದ ಸ್ಪಷ್ಟನೆ

ವಿವಿಧ ರಾಜ್ಯದಲ್ಲಿ ಎಂಪೇರಿಕಲ್ ಡೇಟಾ ಆಧಾರದ ಮೇಲೆ ಹೊಸ ಮೀಸಲಾತಿ ಪ್ರಕಟ ಮಾಡಲಾಗಿದ್ದು, ನಮ್ಮಲ್ಲೂ ಅದೇ ರೀತಿಯ ಕೆಲಸ ಮಾಡಿಲಾಗಿದೆ ಎಂದು ರಾಜ್ಯ ಸರಕಾರ ಸ್ಪಷ್ಟನೆ ನೀಡಿದೆ.
ಅಶ್ವತ್ಥ್ ನಾರಾಯಣ್
ಅಶ್ವತ್ಥ್ ನಾರಾಯಣ್

ಬೆಂಗಳೂರು: ವಿವಿಧ ರಾಜ್ಯದಲ್ಲಿ ಎಂಪೇರಿಕಲ್ ಡೇಟಾ ಆಧಾರದ ಮೇಲೆ ಹೊಸ ಮೀಸಲಾತಿ ಪ್ರಕಟ ಮಾಡಲಾಗಿದ್ದು, ನಮ್ಮಲ್ಲೂ ಅದೇ ರೀತಿಯ ಕೆಲಸ ಮಾಡಿಲಾಗಿದೆ ಎಂದು ರಾಜ್ಯ ಸರಕಾರ ಸ್ಪಷ್ಟನೆ ನೀಡಿದೆ.

ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಪ್ರಕಟಿಸಿರುವ     ಮೀಸಲಾತಿ ವಿರುದ್ಧ ವಿಪಕ್ಷಗಳು ಆರೋಪ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಚಿವ ಅಶ್ವಥ್ ನಾರಾಯಣ್, ಶಾಸಕ ಸತೀಶ್ ರೆಡ್ಡಿ, ಪರಿಷತ್ ಸದಸ್ಯ ರವಿಕುಮಾರ್ ಜಂಟಿ ಸುದ್ದಿಗೋಷ್ಟಿ ನಡೆಸಿ, ಮೀಸಲಾಯಿಯನ್ನು ಮರುಪರಿಶೀಲನೆ ಮಾಡಬೇಕೆಂಬ ವಿಚಾರ ಬಂದಿದೆ. ಈಗ ಮೀಸಲಾತಿ  ದೊಡ್ಡ ಚಾಲೆಂಜ್ ಆಗಿದೆ. ಮಹಾರಾಷ್ಟ್ರದಲ್ಲಿ ದೊಡ್ಡ ಸಮಸ್ಯೆ ಆಗಿದೆ. ವಿವಿಧ ರಾಜ್ಯದಲ್ಲಿ ಎಂಪೇರಿಕಲ್ ಡೇಟಾ ಆಧಾರದ ಮೇಲೆ ಮೀಸಲಾತಿ ನಮ್ಮಲ್ಲೂ ಮಾಡುವ ಕೆಲಸ ಸರ್ಕಾರ ಮಾಡಿದೆ. 50% ಒಬಿಸಿ, 50% ಜನರಲ್, 50% ಮಹಿಳೆಯರಿಗೂ ಮೀಸಲಾತಿ ನೀಡಲಾಗಿದೆ ಎಂದರು.

ಬೇರೆ ಪಕ್ಷಗಳು ಅವರದ್ದೇ ಆದ ವಿರೋಧ ಮಾಡುತ್ತಿವೆ. ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಆದರೆ ಏಕಾ ಏಕಿ ಗೂಂಡಾಗಿರಿ ಮಾಡಿದ್ದಾರೆ. ಗೂಂಡಾಗಿರಿ, ತೋಳ್ಬಲ ಮೂಲಕ ಗಲಭೆ ಮಾಡಿದ್ದಾರೆ. ಕಾನೂನು ಅರಿವಿಲ್ಲದೆ, ಸಚಿವರಾಗಿದ್ದವರು, ಸರ್ಕಾರ ನಡೆಸಿದವರು ಇವರೆಲ್ಲಾ. ವಿಧಾನಸೌಧದಲ್ಲಿ ನಡೆದುಕೊಂಡ ರೀತಿ ಸರಿ ಇಲ್ಲ. ಕಾನೂನನ್ನು ಗಾಳಿಗೆ ತೂರಿ, ತಲೆಯಲ್ಲಿ ಏನೂ ಇಲ್ಲ ಅನ್ನೋದನ್ನ ತೋರಿಸಿದ್ದಾರೆ ಇದನ್ನ ಸರ್ಕಾರ ಖಂಡಿಸುತ್ತದೆ. ಸಾರ್ವಜನಿಕರು ಕೂಡ ಇವರ ವರ್ತನೆ ಖಂಡಿಸಿದ್ದಾರೆ ಎಂದು ಹೇಳಿದರು.

ಅವರ ಹೇಳಿಕೆ ನೋಡಿದ್ದೀರಾ ಎಂದು ಪ್ರಶ್ನಿಸಿದ ಸಚಿವ ಅಶ್ವಥ್ ನಾರಾಯಣ, ಯಾವುದೇ ಮುಸ್ಲಿಂ ಮಹಿಳೆಯರು ಪ್ರತಿನಿಧಿ ಆಗುವಂತಿಲ್ಲ ಅಂತ ಜಮೀರ್ ಈ ಹಿಂದೆ ಹೇಳಿದ್ದರು. ಈಗ ಮಹಿಳಾ ಮೀಸಲಾತಿ ಬೇಡ ಅಂತಿದ್ದಾರೆ. ಮುಸ್ಲಿಂ ಮಹಿಳೆಯರು ಉನ್ನತ ಸ್ಥರಕ್ಕೆ ಬರಬಾರದಾ? ರಾಮಲಿಂಗಾರೆಡ್ಡಿ ಅವರು ಬಂದಾಗಿನಿಂದ ಮಂತ್ರಿಗಳೇ. ರಾಜಕೀಯವಾಗಿ ಎಲ್ಲೆಡೆ ಬೇರೂರಿದ್ದಾರೆ. ನಮ್ಮ ಪಕ್ಷ, ನಮ್ಮ ಸರ್ಕಾರ ಕಾನೂನಿನ ಪ್ರಕಾರವೇ ಮೀಸಲಾತಿ ನೀಡಿದ್ದೇವೆ. ಕಾನೂನಿನ ಉಲ್ಲಂಘನೆ ಆಗಿದ್ದರೆ ತೋರಿಸಲಿ ಎಂದು ಆಕ್ರೋಶ ಹೊರಹಾಕಿದರು.

ಈಗ ಅವರಿಗೆ ಚುನಾವಣೆ ಬೇಕಿಲ್ಲ. ಚುನಾವಣೆ ಬೇಡ ಅನ್ನೋದೇ ಕಾಂಗ್ರೆಸ್ ಉದ್ದೇಶ. ಚುನಾವಣೆಗೂ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಕಾಂಗ್ರೆಸ್ ಆತ್ಮ ವಿಶ್ವಾಸ ಕಳೆದುಕೊಂಡಿದೆ. ಬಿಬಿಎಂಪಿ ಸ್ಥಳೀಯ ಚುನಾವಣೆಯಲ್ಲಿ ವಿವಿಧ ವಿಚಾರವಾಗಿ ಬಹುದಿನದ ಬೇಡಿಕೆ ಇತ್ತು. ಪ್ರತ್ಯೇಕ ಕಾಯ್ದೆ ಬೆಂಗಳೂರಿಗೆ ತರಬೇಕು ಅಂತ ಬೆಂಗಳೂರಿಗರ ಬೇಡಿಕೆ ಆಗಿತ್ತು. ನಮ್ಮ ಪ್ರಣಾಳಿಕೆಯ ಘೋಷಣೆ ಕೂಡ ಆಗಿತ್ತು. ನೂತನ ಕಾಯ್ದೆ ತರುವ ಕೆಲಸ ನಮ್ಮ ಸರ್ಕಾರದಲ್ಲಿ ಆಗಿದೆ. ಹಳೆಯ ಕಾಯ್ದೆ ಅಥವಾ ನೂತನ ಕಾಯ್ದೆ ಅಡಿಯಲ್ಲಿ ಆಗಬೇಕಾ ಅಂತ ಚರ್ಚೆಯಾಗಿತ್ತು. ಕೋರ್ಟ್ ಮೆಟ್ಟಿಲೇರಿದ್ರು. ಕೋರ್ಟ್ ತೀರ್ಪಿನ ಬಳಿಕ ನಮ್ಮ ಸರ್ಕಾರ ಬೇಕಿರೋ ಕೆಲಸ ಮಾಡಿದೆ ಎಂದು ತಿಳಿಸಿದರು.

2011ರ ಗಣತಿ ಆಧಾರದ ಮೇಲೆ, ಬೆಂಗಳೂರು ಹೊರ ವಲಯ, ಒಳ ವಲಯ ಸೆನ್ಸ್ ಮೇಲೆ ಆಗಿದೆ. ಹೊರ ವಲಯದಲ್ಲಿ ಜನ ಸಂಖ್ಯೆ ಹೆಚ್ಚಾಗಿದೆ. ಪರಿಣಾಮಕಾರಿಯಾಗಿ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಡಬೇಕು. ಹೊರ ಮತ್ತು ಒಳ ವಲಯಗಳ ಸಮಸ್ಯೆ ಹೆಚ್ಚಿದ್ದು, ಬಗೆಹರಿಸಿಕೊಳ್ಳಬೇಕಿದೆ. ಪ್ರಾತಿನಿಧ್ಯ ಕೊಡಲು ಡಿ ಲಿಮಿಟೇಷನ್ ಮೂಲಕ ವ್ಯತ್ಯಾಸ ಸರಿದೂಗಿಸಲಾಗಿದೆ. ಬಿಬಿಎಂಪಿ ಚುನಾವಣೆ ಎದುರಿಸಲು ನಾವು ಸಿದ್ದರಿದ್ದೇವೆ. ಮಹಿಳೆ ವಿರೋಧಿ ಅಂದ್ರೆ ಕಾಂಗ್ರೆಸ್. ಅದನ್ನ ತೋರಿಸಿಕೊಂಡಿದೆ. ರಾಜಕೀಯ ಪಕ್ಷ ಅಂದ್ರೆ ವಿರೋಧ ಇದ್ದೇ ಇರುತ್ತೆ. ಬಿಜೆಪಿ ಪಕ್ಷದಲ್ಲಿ ಏನು ಮಾಡಬೇಕೋ ಅದನ್ನ ಮಾಡಿದ್ದೇವೆ. ಸರ್ಕಾರದ ಹಂತದಲ್ಲಿ ಏನು ಮಾಡಬೇಕೋ ಅದನ್ನ ಮಾಡಿದ್ದೇವೆ‌. ಕಾನೂನು ಪ್ರಕಾರ ಎಲ್ಲವೂ ಮಾಡಿದ್ದೇವೆ.. ಯಾವುದಾದ್ರೂ ತಪ್ಪಿದ್ರೆ ತೋರಿಸಲಿ, ಆಕ್ಷೇಪಣೆಗಳನ್ನು ಸಲ್ಲಿಸಲಿ ಎಂದು ಸವಾಲು ಹಾಕಿದರು.

243 ವಾರ್ಡ್‌ಗಳಿಗೆ ಎಷ್ಟು ಮಹಿಳಾ ಮೀಸಲಾತಿ ನೀಡಬೇಕು, SC, ST, OBC ಎಲ್ಲವೂ ಕಾನೂನಿನ ಪ್ರಕಾರ ನೀಡಿದ್ದೇವೆ. ಬೆಂಗಳೂರು ಕೂಡ ಒಂದು ಯುನೀಟ್. ವಾರ್ಡ್ ವಿಂಗಡಣೆ ಅಬ್ಜೆಕ್ಷನ್ ವಿಚಾರಕ್ಕೆ ಸಂಬಂಧಿಸದಂತೆ ಮೂರೂವರೆ ಸಾವಿರ ಅರ್ಜಿಗಳಿಗೂ ಉತ್ತರ ಕೊಡಲಾಗಿದೆ. ಇವರ ಜೋಪಡಿಯಲ್ಲಿ ಬರೀ ಗಲಾಟೆ ಮಾಡೋರೆ. ಕೈ ಕಾಲು ಆಡಿಸೋದು ಬಿಟ್ಟು, ತಲೆ‌ ಉಪಯೋಗಿಸಲಿ ಎಂದು ಕಾಂಗ್ರೆಸ್ ಶಾಸಕರಿಗೆ ಸಚಿವ ಅಶ್ವಥ್ ನಾರಾಯಣ್ ಸಲಹೆ ನೀಡಿದರು.

ನನಗೆ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಜಮೀರ್‌ ಅಹ್ಮದ್ ಅವರಷ್ಟು ರಾಜಕೀಯ ಅನುಭವ ಇಲ್ಲ ಎಂದು ಕಾಂಗ್ರೆಸ್ ಶಾಸಕರಿಗೆ ಅಶ್ವಥ್ ನಾರಾಯಣ್ ಟಾಂಗ್ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com