ಚಾಟಿ ಬೀಸಿದ ಬಳಿಕ ಎಚ್ಚೆತ್ತ ಸರ್ಕಾರ, ಹಿಂದಿ ರಾಷ್ಟ್ರಭಾಷೆ ಎಂಬ ಭ್ರಮೆಯಿಂದ ಹೊರಬನ್ನಿ ಎಂದ ಸಿದ್ದರಾಮಯ್ಯ

ಹಿಂದಿ ಏರಿಕೆ ವಿರುದ್ಧ ರಾಜ್ಯದಲ್ಲಿ ಕೂಗುಗಳು ಕೇಳಿಬರುತ್ತಿರುವಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪೇಚಿಗೆ ಸಿಲುಕಿದ್ದ ಘಟನೆ ನಡೆದಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್‌ನಲ್ಲಿ'ಹರ್‌ ಘರ್‌ ತಿರಂಗಾ' ಕಾರ್ಯಕ್ರಮದ ಬಗ್ಗೆ ಹಿಂದಿಯಲ್ಲೇ ಮಾಹಿತಿ ಪ್ರಕಟಿಸಿದ್ದನ್ನು ಸಿದ್ದರಾಮಯ್ಯ ಆಕ್ಷೇಪಿಸಿದ್ದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಹಿಂದಿ ಏರಿಕೆ ವಿರುದ್ಧ ರಾಜ್ಯದಲ್ಲಿ ಕೂಗುಗಳು ಕೇಳಿಬರುತ್ತಿರುವಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪೇಚಿಗೆ ಸಿಲುಕಿದ್ದ ಘಟನೆ ನಡೆದಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್‌ನಲ್ಲಿ'ಹರ್‌ ಘರ್‌ ತಿರಂಗಾ' ಕಾರ್ಯಕ್ರಮದ ಬಗ್ಗೆ ಹಿಂದಿಯಲ್ಲೇ ಮಾಹಿತಿ ಪ್ರಕಟಿಸಿದ್ದನ್ನು ಸಿದ್ದರಾಮಯ್ಯ ಆಕ್ಷೇಪಿಸಿದ್ದರು.

ಅದಾದ ಬಳಿಕ ಎಚ್ಚೆತ್ತುಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಆಗಿದ್ದ ತಪ್ಪನ್ನು ಸರಿಪಡಿಸಿಕೊಂಡಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ನಾನು ಚಾಟಿ ಬೀಸಿದ ನಂತರ ಸರ್ಕಾರ ಎಚ್ಚೆತ್ತುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿ ಅನಗತ್ಯವಾಗಿ ತುರುಕಿದ್ದ ಹಿಂದಿಯನ್ನು ಕಿತ್ತೊಗೆದಿದೆ. ಬಿಜೆಪಿ ನಾಯಕರೇ, ನಾನೊಬ್ಬ ಕನ್ನಡಿಗ ಎಂಬ ಸ್ವಾಭಿಮಾನವನ್ನು ನೀವೇ ಬೆಳೆಸಿಕೊಳ್ಳಬೇಕು, ಇದು ನಾವು ಹೇಳಿ ಬರುವಂತದ್ದಲ್ಲ. ಹಿಂದಿ ರಾಷ್ಟ್ರಭಾಷೆ ಎಂಬ ಭ್ರಮೆಯಿಂದ ಹೊರಬನ್ನಿ' ಎಂದು ಚಾಟಿ ಬೀಸಿದ್ದಾರೆ.

ಕೇಂದ್ರ ಸಚಿವ ಅಮಿತ್‌ ಶಾ ಅವರು ಭಾಗವಹಿಸಿದ್ದ ‘ಸಂಕಲ್ಪದಿಂದ ಸಿದ್ಧಿ’ ಕಾರ್ಯಕ್ರಮದ ಬ್ಯಾನರ್‌ ಸಂಪೂರ್ಣ ಹಿಂದಿಮಯವಾಗಿತ್ತು. ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಜಾಲತಾಣದಲ್ಲಿ ಹಿಂದಿಯ ಕಿರೀಟ ಇಟ್ಟುಕೊಂಡು ಮೆರೆಸುತ್ತಿದೆ. ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು ಹಿಂದಿ ಭಾಷೆಗೆ ಸಂಪೂರ್ಣ ಶರಣಾಗಿದೆ ಎಂಬುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣವೇ ಸಾಕ್ಷಿ. ಮೊದಲು ಈ ಜಾಲತಾಣದಿಂದ ಹಿಂದಿ ಕಿತ್ತೊಗೆದು ಕನ್ನಡಿಗರ ಸ್ವಾಭಿಮಾನ ಉಳಿಸಿ' ಎಂದೂ ಸಿದ್ದರಾಮಯ್ಯ ಆಗ್ರಹಿಸಿದ್ದರು.

ಇನ್ನೊಂದೆಡೆ ರಾಜ್ಯ ಕಾಂಗ್ರೆಸ್ ಕೂಡ ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.

ಮಳೆ ಅಬ್ಬರಕ್ಕೆ ಹಲವು ಮಂದಿ ಜೀವ ಬಿಟ್ಟಿದ್ದಾರೆ, ಅಪಾರ ಬೆಳೆ ಹಾನಿಯಾಗಿದೆ. ಬಸವರಾಜ ಬೊಮ್ಮಾಯಿ ಅವರೇ, ನೆರೆ ಪರಿಹಾರ ಕೇಳಲು ದೆಹಲಿಗೆ ಹೋಗುವ ಅಗತ್ಯವಿರಲಿಲ್ಲ, ಎನ್‌ಡಿಆರ್‌ಎಫ್ ಮುಖ್ಯಸ್ಥ ಅಮಿತ್ ಶಾ ಅವರೇ ಬಂದಿದ್ದರು. ಪ್ರವಾಹ ವೀಕ್ಷಣೆಗೆ ಕರೆದೊಯ್ಯಲಿಲ್ಲ ಏಕೆ? ಪರಿಹಾರದ ಬಗ್ಗೆ ಮಾತಾಡಲಿಲ್ಲ ಏಕೆ? ಕೇಳಲು ಭಯವೇ, ಪರಿಹಾರ ಸಿಗದು ಎಂಬ ತಾತ್ಸಾರವೇ!? ಎಂದು ಪ್ರಶ್ನಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಕರ್ನಾಟಕದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಕರ್ನಾಟಕದಿಂದ 6 ಕೇಂದ್ರ ಸಚಿವರಿದ್ದಾರೆ. ಡಬಲ್ ಇಂಜಿನ್ ಸರ್ಕಾರವಿದೆ. ಇಷ್ಟೆಲ್ಲ ಇರುವುದು 'ಊಟಕ್ಕೆ ಸಿಗದ ಉಪ್ಪಿನಕಾಯಿಯಂತೆ'!. ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರ ಬಳಿ ಯಾರೊಬ್ಬರೂ ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ತುಟಿ ಬಿಚ್ಚಲಿಲ್ಲ, ಪರಿಹಾರ ಕೇಳಲಿಲ್ಲ ಏಕೆ? ಎಂದು ಕಿಡಿಕಾರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com