ಲತಾ ರಜನಿಕಾಂತ್ ಗೆ ಒಂದೆಡೆ ರಿಲೀಫ್, ಮತ್ತೊಂದೆಡೆ ಸಂಕಷ್ಟ: ಪೋರ್ಜರಿ ಕೇಸ್ ವಿಚಾರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ವಿರುದ್ಧ ದಾಖಲಾಗಿರುವ ವಂಚನೆ ಮತ್ತು ಸುಳ್ಳು ಪ್ರಕರಣಗಳನ್ನು ರದ್ದುಪಡಿಸಿರುವ ಹೈಕೋರ್ಟ್ ಫೋರ್ಜರಿ ಪ್ರಕರಣದ ವಿಚಾರಣೆ ಮುಂದುವರಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
Published: 10th August 2022 09:00 AM | Last Updated: 10th August 2022 01:31 PM | A+A A-

ಲತಾ ರಜನಿತಾಂತ್
ಬೆಂಗಳೂರು: ನಟ ರಜನಿಕಾಂತ್ ಅವರ ಪತ್ನಿ ಲತಾಗೆ ಸಂಕಷ್ಟ ಮುಂದುವರಿದಿದೆ. ‘ಕೊಚಾಡಿಯನ್’ ಸಿನಿಮಾಗೆ ಸಂಬಂಧಿಸಿ ಹಣಕಾಸು ವಿವಾದ ಕೋರ್ಟ್ ಮೆಟ್ಟಿಲು ಏರಿತ್ತು. ಲತಾ ವಿರುದ್ಧ ಫೋರ್ಜರಿ, ವಂಚನೆ, ಸುಳ್ಳು ಹೇಳಿಕೆ ಕೇಸ್ ದಾಖಲಾಗಿತ್ತು.
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ವಿರುದ್ಧ ದಾಖಲಾಗಿರುವ ವಂಚನೆ ಮತ್ತು ಸುಳ್ಳು ಪ್ರಕರಣಗಳನ್ನು ರದ್ದುಪಡಿಸಿರುವ ಹೈಕೋರ್ಟ್ ಫೋರ್ಜರಿ ಪ್ರಕರಣದ ವಿಚಾರಣೆ ಮುಂದುವರಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಕೊಚಾಡಿಯನ್ ಸಿನಿಮಾದಿಂದ ಆದ ಆರ್ಥಿಕ ನಷ್ಟ ಪ್ರಕರಣ ಕುರಿತು ವಿರುದ್ಧ ದಾಖಲಾಗಿರುವ ನಕಲಿ, ಸುಳ್ಳು ಹೇಳಿಕೆ ಮತ್ತು ವಂಚನೆ ಪ್ರಕರಣ ರದ್ದುಪಡಿಸುವಂತೆ ಕೋರಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿದಾರರ ವಿರುದ್ಧದ ವಂಚನೆ ಹಾಗೂ ಸುಳ್ಳು ಪ್ರಕರಣವನ್ನು ರದ್ದುಪಡಿಸಿ ಆದೇಶ ಮಾಡಿದೆ. ಆದರೆ ನಕಲು ಮಾಡಿರುವ ಆಪಾದನೆಯ ಪ್ರಕರಣವನ್ನು ಮುಂದುವರಿಸಿ ಕಾನೂನು ಪ್ರಕಾರ ಇತ್ಯರ್ಥಪಡಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆದೇಶಿಸಿದೆ.
ತಮಿಳು ಚಿತ್ರ ಕೊಚಾಡಿಯನ್ ಸಿನಿಮಾವನ್ನು ರಜನಿಕಾಂತ್ ಅವರ ಪುತ್ರಿ ನಿರ್ದೇಶನ ಮಾಡಿದ್ದರು. ಆ ಚಿತ್ರದ ಸಂಬಂಧ ಮೆ. ಆ್ಯಡ್ ಬ್ಯೂರೊ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆ. ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್‌ಮಂಟ್ ಲಿಮಿಟೆಡ್ ನಡುವೆ ಹಣಕಾಸು ವ್ಯವಹಾರ ನಡೆದಿತ್ತು.
ಇದನ್ನೂ ಓದಿ: ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾದ ರಜನಿ, ರಾಜಕಾರಣಕ್ಕೆ ಮರಳುತ್ತಾರಾ ಸೂಪರ್ ಸ್ಟಾರ್?
ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಅವರು ಭದ್ರತಾ ಖಾತರಿ ನೀಡಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾಗಿದ್ದರೂ ಮೆರ್ಸಸ್ ಆ್ಯಡ್ ಬ್ಯೂರೊ ಅಡ್ವರ್‌ಟೈಸ್ಮಂಟ್ ಪ್ರೈವೇಟ್ ಲಿಮಿಟೆಡ್‌ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ. ಈ ವಿವಾದ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಈ ಕುರಿತ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ ಅವರು ಬೆಂಗಳೂರಿನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯವು 2014ರ ಡಿಸೆಂಬರ್ 2ರಂದು ಮಾಧ್ಯಮಗಳ ವಿರುದ್ದ ಪ್ರತಿಬಂಧಕಾದೇಶ ಮಾಡಿತ್ತು. ಆದರೆ, 2015ರಲ್ಲಿ ಫೆಬ್ರವರಿ 13ರಂದು ವಿಚಾರಣೆಯನ್ನು ವಿಚಾರಣಾ ವ್ಯಾಪ್ತಿ ಹೊಂದಿರುವ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಈ ವೇಳೆ, ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಲತಾ ಅವರ ಅರ್ಜಿಯನ್ನು ಹೈಕೋರ್ಟ್ 2016ರಲ್ಲಿ ವಜಾಗೊಳಿಸಿತ್ತು.
ಈ ಮಧ್ಯೆ, ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ ಪಡೆಯಲು ಬೆಂಗಳೂರು ಪ್ರೆಸ್‌ಕ್ಲಬ್ ಅಧೀನದಲ್ಲಿ ಇರದ ಸಂಸ್ಥೆಯೊಂದರ ನಕಲಿ ದಾಖಲೆಯನ್ನು ಲತಾ ಅವರು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಮೆರ್ಸಸ್ ಆ್ಯಡ್ ಬ್ಯೂರೊ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯು 2015ರ ಮೇ 30ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಖಾಸಗಿ ದೂರು ದಾಖಲಿಸಿತ್ತು.
2015ರ ಜೂನ್ 9ರಂದು ಲತಾ ವಿರುದ್ಧ ಪೊಲೀಸರಿಂದ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಧೀನ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಪ್ರಕರಣದ ವಿಚಾರಣೆ ರದ್ದುಪಡಿಸಬೆಕೆಂದು ರಜನಿಕಾಂತ್ ಅವರ ಪತ್ನಿ ಲತಾ ಅವರು ಹೈಕೋರ್ಟ್ ಮೊರೆ ಹೊಗಿದ್ದರು. ನ್ಯಾಯಾಲಯ ಲತಾ ಅವರಿಗೆ ಪ್ರಕರಣದಲ್ಲಿ ಭಾಗಶಃ ರಿಲೀಫ್ ನೀಡಿದೆ.