ಮಲೆಮಹದೇಶ್ವರ ಬೆಟ್ಟದ ಜನರ ಭವಿಷ್ಯವನ್ನು ಹುಲಿಗಳೇ ನಿರ್ಧರಿಸಬೇಕಿದೆ: ಸಚಿವರ ದ್ವಂದ್ವ ಹೇಳಿಕೆಯಿಂದ ಗೊಂದಲ ಸೃಷ್ಟಿ

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವ ಕುರಿತು ಬಿಜೆಪಿ ಸರ್ಕಾರ ಇಬ್ಬರು ಸಚಿವರು ತದ್ವಿರುದ್ಧ ಹೇಳಿಕೆ ನೀಡಿದ್ದು, ಕರ್ನಾಟಕ-ತಮಿಳುನಾಡು ಗಡಿಯಲ್ಲಿ ವಾಸಿಸುತ್ತಿರುವ 30 ಗ್ರಾಮಗಳ 25,000ಕ್ಕೂ ಅಧಿಕ ಜನರು ಇದೀಗ ಗೊಂದಲದಲ್ಲಿ ಮುಳುಗಿದ್ದಾರೆ.
ಮಲೆ ಮಹದೇಶ್ವರ ವನ್ಯಧಾಮ
ಮಲೆ ಮಹದೇಶ್ವರ ವನ್ಯಧಾಮ
Updated on

ಮೈಸೂರು: ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವ ಕುರಿತು ಬಿಜೆಪಿ ಸರ್ಕಾರ ಇಬ್ಬರು ಸಚಿವರು ತದ್ವಿರುದ್ಧ ಹೇಳಿಕೆ ನೀಡಿದ್ದು, ಕರ್ನಾಟಕ-ತಮಿಳುನಾಡು ಗಡಿಯಲ್ಲಿ ವಾಸಿಸುತ್ತಿರುವ 30 ಗ್ರಾಮಗಳ 25,000ಕ್ಕೂ ಅಧಿಕ ಜನರು ಇದೀಗ ಗೊಂದಲದಲ್ಲಿ ಮುಳುಗಿದ್ದಾರೆ.

ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದರೆ ಕಾಡಂಚಿನ ಗ್ರಾಮಗಳಿಗೆ ಅನಾನುಕೂಲ ಆಗಲಿದೆ. ಆದ್ದರಿಂದ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದಿಲ್ಲ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದರು. ಆಗ ಮಲೆಮಹದೇಶ್ವರ ವನ್ಯಧಾಮದ ವಿಭಾಗ ಮತ್ತು ಹನೂರು ತಾಲ್ಲೂಕಿನಲ್ಲಿ ವಾಸಿಸುತ್ತಿರುವ ಜನರು ನಿಟ್ಟುಸಿರು ಬಿಟ್ಟಿದ್ದರು.

ಆದರೆ, ರಾಜ್ಯ ವಿರೋಧಿಸಿದರೂ ಕೂಡ ಮಲೆಮಹದೇಶ್ವರ ಬೆಟ್ಟಕ್ಕೆ ಹುಲಿ ಸಂರಕ್ಷಿತ ಸ್ಥಾನಮಾನ ಸಿಗಲಿದೆ ಎಂಬ ಅರಣ್ಯ ಸಚಿವ ಉಮೇಶ್‌ ಕತ್ತಿ ಅವರ ಹೇಳಿಕೆಯಿಂದ ಮತ್ತೆ ಜನರ ನಿರೀಕ್ಷೆ ಹುಸಿಯಾಗಿದೆ.

ಆಗಸ್ಟ್‌ 3ರಂದು ಹನೂರು ತಾಲೂಕಿನ‌ ಪೊನ್ನಾಚಿ ಗ್ರಾಮದಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಸೋಮಣ್ಣ, 'ಬಸವರಾಜ ಬೊಮ್ಮಾಯಿ ಸರ್ಕಾರ ಈ ಪ್ರಸ್ತಾವನೆಗೆ ಅವಕಾಶ ನೀಡುವುದಿಲ್ಲ. ಇದು ಸ್ಥಳೀಯ ನಿವಾಸಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭಕ್ತರ ಸಂಚಾರವನ್ನು ಕೂಡ ನಿರ್ಬಂಧಿಸುತ್ತದೆ. ಹೀಗಾಗಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದಿಲ್ಲ' ಎಂದಿದ್ದರು.

ಆದರೆ ಇತ್ತೀಚೆಗೆ ಹನೂರು ತಾಲೂಕಿನ ಶಾಗ್ಯಾಗೆ ಭೇಟಿ ನೀಡಿದ ಉಮೇಶ್ ಕತ್ತಿ ಅವರು, 'ಇಲ್ಲಿ 25ಕ್ಕೂ ಹೆಚ್ಚು ದೊಡ್ಡ ಹುಲಿಗಳಿವೆ ಮತ್ತು ಸಂರಕ್ಷಿತ ಪ್ರದೇಶದ ಸ್ಥಾನಮಾನಕ್ಕೆ ಅರ್ಹವಾಗಿದೆ. 'ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಣೆ ಮಾಡುವುದು ಒಳ್ಳೆಯದು. ಇದಕ್ಕೆ ನನ್ನದೇನು ಅಭ್ಯಂತರವಿಲ್ಲ. ಇದರಿಂದ ಅರಣ್ಯ ಸಂಪತ್ತು ವೃದ್ಧಿಯಾಗಲಿದೆ' ಎಂದು ತಿಳಿಸಿದ್ದರು.

ಕತ್ತಿ ಅವರ ಹೇಳಿಕೆಯಿಂದ ಇಲ್ಲಿನ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸಾಲೂರು ಬ್ರಹ್ಮನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಆರ್.ನರೇಂದ್ರ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕತ್ತಿ ಅವರು ಮಠಕ್ಕೆ ಭೇಟಿ ನೀಡಿದಾಗ, 'ಈ ಬಗ್ಗೆ ಸಚಿವ ಸಂಪುಟದಲ್ಲಿ ಇನ್ನೂ ಚರ್ಚೆಯಾಗಬೇಕಿದೆ. ಆದರೆ ರಾಜ್ಯವು ಒಲವು ತೋರದಿದ್ದರೂ, ಕೇಂದ್ರವು ಮುಂದೆ ಹೋಗಿ ಮಲೆಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com