ಉಡುಪಿ: ಮಹಿಳೆ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಯುವಕನ ಬಂಧನ

ಮಹಿಳೆ ಮೇಲೆ ಹಲ್ಲೆ, ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವಕನೋರ್ವನನ್ನು ಕುಂದಾಪುರ ಗ್ರಾಮೀಣ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ಮಹಿಳೆ ಮೇಲೆ ಹಲ್ಲೆ, ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವಕನೋರ್ವನನ್ನು ಕುಂದಾಪುರ ಗ್ರಾಮೀಣ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಶಾಲೆಯಿಂದ ಬರುತ್ತಿದ್ದ ತನ್ನ ಮಗನಿಗಾಗಿ ಕಾಯುತ್ತಿದ್ದ 32 ವರ್ಷದ ಮಹಿಳೆ ದೇವಕಿ ಪೂಜಾರಿ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ ಪ್ರವೀಣ್, ನಂತರ ಆಕೆಯ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ದೇವಕಿ ಅವರನ್ನು ದಾರಿಹೋಕರು ಮಣಿಪಾಲ್ ನ ಆಸ್ಪತ್ರೆಗೆ ದಾಖಲಿಸಿದ್ದರು. ಮಾರನೇ ದಿನ ಅವರು ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ದರು. 

ಮೂಲಗಳ ಪ್ರಕಾರ ಆಗಸ್ಟ್ 5 ರಂದು ಸಂಜೆ 4.15 ರಿಂದ 4.25ರ ನಡುವೆ ಈ ಘಟನೆ ನಡೆದಿದೆ. ಶಾಲಾ ಬಸ್ ಬರುವುದಕ್ಕೂ ಮುನ್ನ ಬೈಕ್ ನಲ್ಲಿ ಬಂದ ದರೋಡೆಕೋರ, ಅಲ್ಲೇ ಹತ್ತಿರದಲ್ಲಿ ಬೈಕ್ ನಿಲ್ಲಿಸಿ ದೇವಕಿ ಇರುವ ಕಡೆಗೆ ಬಂದಿದ್ದಾನೆ. ನಂತರ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ದರೋಡೆಕೋರ ಚಿನ್ನಾಭರಣ ದೋಚಲು ಪ್ರಯತ್ನಿಸಿದಾಗ ಮೊದಲಿಗೆ ದೇವಕಿ ತಡೆದಿದ್ದಾಳೆ. ಆದರೆ, ಹಲ್ಲೆಕೋರ ಎರಡು ಬಾರಿ ಕಬ್ಬಿಣದ ರಾಡ್ ನಿಂದ ಆಕೆಯ ತಲೆ ಮೇಲೆ ಹೊಡೆದಾಗ ದೇವಕಿ ನೆಲದ ಮೇಲೆ ಬಿದಿದ್ದಾರೆ. ನಂತರ ಕರಿಮಣಿ ಸರ, ಬಳೆ ಮತ್ತು ಓಲೆ ಸೇರಿದಂತೆ ಸುಮಾರು 1,60,000 ರೂ. ಮೊತ್ತದ ಚಿನ್ನಾಭರಣದೊಂದಿಗೆ ದರೋಡೆಕೋರ ಪರಾರಿಯಾಗಿದ್ದ ಎನ್ನಲಾಗಿದೆ.

ಆರೋಪಿ ಪ್ರವೀಣ್ ಇದೇ ಮೊದಲ ಬಾರಿಗೆ ಇಂತಹ ಕೃತ್ಯದಲ್ಲಿ ತೊಡಗಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ. ಕುಂದಾಪುರ ಮುಖ್ಯ ರಸ್ತೆಯಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ವಿಚಾರಣೆ ವೇಳೆ ಆತ ತಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com