ಉಡುಪಿಯಲ್ಲೂ ವೀರ ಸಾವರ್ಕರ್ ಪೋಸ್ಟರ್ ವಿವಾದ: ಬ್ರಹ್ಮಗಿರಿ ಸರ್ಕಲ್ ನಲ್ಲಿ ಕಟೌಟ್ ವಿಷಯಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕಿತ್ತಾಟ
ಉಡುಪಿ: ಅತ್ತ ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಹಾಕಿದ್ದ ಹಿಂದೂ ಸಮಾಜದ ಮುಖಂಡ ವೀರ ಸಾವರ್ಕರ್ ಮತ್ತು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪೋಸ್ಟರ್ ಸಂಬಂಧ ವಿವಾದವೆದ್ದು ಗಲಭೆ ಉಂಟಾಗಿ ಚಾಕು ಇರಿತ ಘಟನೆ ನಡೆದು ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗ ಇತ್ತ ಕೃಷ್ಣನ ನಾಡು ಉಡುಪಿಯಲ್ಲಿಯೂ ವೀರ ಸಾವರ್ಕರ್ ಪೋಸ್ಟರ್ ವಿವಾದ (Savarkar poster row) ಉಂಟಾಗಿದೆ.
ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಂದು ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ವೀರ ಸಾವರ್ಕರ್ ಪೋಸ್ಟರ್ ನ್ನು ಹಾಕಿದ್ದರು. ಅದನ್ನು ತೆಗೆಯುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಇಲ್ಲಿ ವೀರ ಸಾವರ್ಕರ್ ಪೋಸ್ಟರ್ ನ್ನು ನೇತು ಹಾಕಿದ್ದರು. ನಂತರ ಶಿವಮೊಗ್ಗದಲ್ಲಿ ಗಲಭೆಯಾದ ಹಿನ್ನೆಲೆಯಲ್ಲಿ ಪೋಸ್ಟರ್ ರಕ್ಷಣೆಗೆ ಬಿಜೆಪಿಯವರೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು ಇದು ನಾಚಿಕೆಗೇಡಿನ ಸಂಗತಿ. ಅದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಬ್ರಹ್ಮಗಿರಿ ಸರ್ಕಲ್ ನಲ್ಲಿರುವ ವೀರ ಸಾವರ್ಕರ್ ಪೋಸ್ಟರ್ ನ್ನು ತೆಗೆಯದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದು ಪೋಸ್ಟರ್ ಹಾಕಿರುವುದರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರಿಂದ ಭದ್ರತೆ: ವಿಷಯ ಸೂಕ್ಷ್ಮವಾಗುತ್ತಿದೆ, ಸಮಸ್ಯೆ ಉಂಟಾಗುವ ಸಾಧ್ಯತೆಯನ್ನು ಮನಗಂಡಿರುವ ಉಡುಪಿ ಪೊಲೀಸರು ಬ್ರಹ್ಮಗಿರಿ ಸರ್ಕಲ್ ಬಳಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕಟೌಟ್ ನಲ್ಲಿ ಯಾವುದೇ ಸಂಘಟನೆಯ ಹೆಸರು ಮುದ್ರಿಸಿಲ್ಲ, ಆದರೆ ಜೈ ಹಿಂದು ರಾಷ್ಟ್ರ ಎಂಬ ಘೋಷಣೆಯಿದೆ. ಸ್ಠಳೀಯ ಎಸ್ ಡಿಪಿಐ ಘಟಕ ಕೂಡ ಪೋಸ್ಟರ್ ಬಗ್ಗೆ ಆಕ್ಷೇಪ ಎತ್ತಿದೆ. ಭಾರತದ ಸ್ವಾತಂತ್ರ್ಯಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ವೀರ ಸಾವರ್ಕರ್ ಇಬ್ಬರೇ ಹೋರಾಟ ಮಾಡಿದವರೇ ಎಂದು ಪ್ರಶ್ನಿಸಿದೆ.
ಸ್ಥಳೀಯ ಪುರಸಭೆ ಪೋಸ್ಟರ್ ನೇತುಹಾಕಲು 15 ದಿನಗಳಿಗೆ ಅನುಮತಿ ನೀಡಿದೆ ಎಂದು ಎಸ್ ಡಿಪಿಐ ಆರೋಪಿಸಿದೆ. ಪೋಸ್ಟರ್ ನ್ನು ಹರಿದು ತೆಗೆಯಲು ನಮಗೆ ಸಾಧ್ಯವಿಲ್ಲ ಏಕೆಂದರೆ ಇದು ಘರ್ಷಣೆಗೆ ಕಾರಣವಾಗಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ. ಉಡುಪಿ ಪುರಸಭೆ ಆಯುಕ್ತ ಉದಯ್ ಶೆಟ್ಟಿ ಅವರಿಗೆ ಕಟೌಟ್ ನ್ನು ತೆರವುಗೊಳಿಸುವಂತೆ ಕಾಂಗ್ರೆಸ್ ನಾಯಕರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ವೀರ ಸಾವರ್ಕರ್ ಪೋಸ್ಟರ್ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಉಡುಪಿಯ ಕಾಂಗ್ರೆಸ್ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದರು, ಆದ ಪೊಲೀಸರು ಅವರನ್ನು ಅಲ್ಲಿಂದ ಚದುರಿಸಿದರು.
ಈ ಮಧ್ಯೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ಬುಧವಾರ ಬ್ರಹ್ಮಗಿರಿ ಸರ್ಕಲ್ ನಲ್ಲಿ ವೀರ ಸಾವರ್ಕರ್ ಕಟೌಟ್‌ಗೆ ಮಾಲಾರ್ಪಣೆ ಮಾಡಿ, ಜೊತೆಗೆ ಎರಡು ಕೇಸರಿ ಧ್ವಜಗಳನ್ನು ಸಹ ಹಾಕಿದರು. ಆದರೆ ಕೇಸರಿ ಧ್ವಜಗಳನ್ನು ಇರಿಸಲು ಯಾವುದೇ ಅನುಮತಿ ಇಲ್ಲ ಎಂದು ಪೊಲೀಸರು ಹೇಳಿದ್ದರಿಂದ ಹಿಂದೂ ಮಹಾಸಭಾ ಮುಖಂಡರು ಅದನ್ನು ತೆಗೆದುಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಮನೆಯ ಅಂಗಳದಲ್ಲೂ ವೀರ ಸಾವರ್ಕರ್ ಭಾವಚಿತ್ರವನ್ನು ಹಿಡಿದುಕೊಂಡು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ, ತಾಕತ್ತಿದ್ದರೆ ವೀರ ಸಾವರ್ಕರ್ ಭಾವಚಿತ್ರ ತೆರವು ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.


