ಟಿಪ್ಪು-ಸಾವರ್ಕರ್ ಪೋಸ್ಟರ್ ವಿವಾದ: ಶಿವಮೊಗ್ಗದಲ್ಲಿ ಜನಜೀವನ ಸಹಜ ಸ್ಥಿತಿಯತ್ತ; ಪೊಲೀಸ್ ಭದ್ರತೆ ಹೆಚ್ಚಳ
ಮಲೆನಾಡು ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹಿಂದೂ ಮಹಾಸಭಾ ನಾಯಕ ವೀರ ಸಾವರ್ಕರ್- ಮೈಸೂರು ಹುಲಿ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಹಿಂದೂ-ಮುಸ್ಲಿಂ ಕೋಮುಗಳ ಮಧ್ಯೆ ಗಲಾಟೆ ಎದ್ದು ಅದು ಚಾಕು ಇರಿತದ ಹಿಂಸಾಚಾರಕ್ಕೆ ತಿರುಗಿ ಶಿವಮೊಗ್ಗದ ಪರಿಸ್ಥಿತಿ ಮತ್ತೊಮ್ಮೆ ನಿಗಿನಿಗಿ ಕೆಂಡದಂತಾಗಿದೆ.
Published: 17th August 2022 09:21 AM | Last Updated: 17th August 2022 02:07 PM | A+A A-

ಶಿವಮೊಗ್ಗ ನಗರದಲ್ಲಿ ಇಂದು ಬೆಳಗಿನ ಸ್ಥಿತಿಗತಿ
ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹಿಂದೂ ಮಹಾಸಭಾ ನಾಯಕ ವೀರ ಸಾವರ್ಕರ್- ಮೈಸೂರು ಹುಲಿ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಹಿಂದೂ-ಮುಸ್ಲಿಂ ಕೋಮುಗಳ ಮಧ್ಯೆ ಗಲಾಟೆ ಎದ್ದು ಅದು ಚಾಕು ಇರಿತದ ಹಿಂಸಾಚಾರಕ್ಕೆ ತಿರುಗಿ ಶಿವಮೊಗ್ಗದ ಪರಿಸ್ಥಿತಿ ಮತ್ತೊಮ್ಮೆ ನಿಗಿನಿಗಿ ಕೆಂಡದಂತಾಗಿದೆ.
ಸೆಕ್ಷನ್ 144 ಹೇರಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನಿನ್ನೆ ಭದ್ರಾವತಿಯಲ್ಲಿ ಹಿಂದೂ ಕಾರ್ಯಕರ್ತ ಸುನಿಲ್ ಎಂಬಾತನಿಗೆ ಚಾಕು ಇರಿಯಲಾಗಿದೆ. ಈ ಮಧ್ಯೆ ಪರಿಸ್ಥಿತಿಗೆ ರಾಜಕೀಯ ಬಣ್ಣ ಬೆರೆತಿದೆ. ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ಎಂದಿನಂತೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸರಮಾಲೆಯೇ ಹರಿದುಬರುತ್ತಿದೆ.
ಘಟನೆಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ನೇರ ಆರೋಪ ಮಾಡಿದ್ದಾರೆ. ನಿನ್ನೆ ಶಿವಮೊಗ್ಗದಲ್ಲಿ ಸಾಮಾನ್ಯ ಜನಜೀವನ ಸ್ತಬ್ಧವಾಗಿತ್ತು. ವ್ಯಾಪಾರ-ವಹಿವಾಟುಗಳು ಸ್ಥಗಿತವಾಗಿದ್ದವು.ಜನರ ಓಡಾಟಕ್ಕೆ ಪೊಲೀಸರು ನಿರ್ಬಂಧ ಹೇರಿದ್ದರು. ನಿನ್ನೆ ಬೆಳಗ್ಗೆ 10.30ರ ನಂತರ ಸಾಮಾನ್ಯ ಸಹಜ ಸ್ಥಿತಿ ಸ್ತಬ್ಧವಾಗಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು.
ಶಿವಮೊಗ್ಗದ ಸೂಕ್ಷ್ಮ ಸ್ಥಳಗಳಲ್ಲಿ ಕ್ಷಿಪ್ರ ಕಾರ್ಯಪಡೆ ಮೆರವಣಿಗೆ ಸಾಗುತ್ತಿತ್ತು. ಯಾವ ವ್ಯಾಪಾರಿಗಳನ್ನು ರಸ್ತೆಗಳಲ್ಲಿ ಓಡಾಡಲು ಬಿಡುತ್ತಿರಲಿಲ್ಲ. ಬೆಳಗ್ಗೆ 10 ಗಂಟೆಯಿಂದ ಎಲ್ಲಾ ವ್ಯಾಪಾರ-ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ಪೊಲೀಸರು ಸೂಚನೆ ನೀಡುತ್ತಿದ್ದರು.
ಕೇವಲ ಅಗತ್ಯ ಸೇವೆಗಳು ಮಾತ್ರ ತೆರೆದಿದ್ದವು. ಔಷಧ, ಹಾಲು, ಆಸ್ಪತ್ರೆಗಳು ಮಾತ್ರ ಇಡೀ ದಿನ ತೆರೆದಿದ್ದವು. ಇಡೀ ನಗರದಲ್ಲಿ ಪೊಲೀಸ್ ಕಾವಲು, ಗಸ್ತನ್ನು ಹೆಚ್ಚಿಸಲಾಗಿದೆ. ಅದರಲ್ಲೂ ಶಿವಮೊಗ್ಗದ ಹಳೆ ಭಾಗಗಳು, ಸೀಗೆಹಟ್ಟಿ, ಕ್ಲರ್ಕ್ ಪೇಟೆ, ಒಟಿ ರಸ್ತೆ, ಆಜಾದ್ ನಗರ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇಂದು ಹೇಗಿದೆ ಪರಿಸ್ಥಿತಿ?: ಇಂದು ಶಿವಮೊಗ್ಗ ಮತ್ತು ಭದ್ರಾವತಿ ನಗರ ಪ್ರದೇಶದಲ್ಲಿ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ಮೊನ್ನೆ ಸೋಮವಾರ ಘರ್ಷಣೆ ನಡೆದ ಅಮೀರ್ ಅಹ್ಮದ್ ಸರ್ಕಲ್ ಗೆ ಹೋಗುವ ಮಾರ್ಗಗಳನ್ನು ಮುಚ್ಚಲಾಗಿತ್ತು. ನಗರದಲ್ಲಿ ಬಸ್ಸುಗಳು ನಿನ್ನೆ ಓಡಾಡುತ್ತಿರಲಿಲ್ಲ. ಕಚೇರಿಗಳಿಗೆ ಹೋಗುವವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಬೆರಳೆಣಿಕೆಯ ಆಟೋರಿಕ್ಷಾ ಮಾತ್ರ ಓಡಾಡುತ್ತಿತ್ತು. ಶಿವಮೊಗ್ಗ ನಗರದ ಬಹುತೇಕ ರಸ್ತೆಗಳು ನೀರವ ಮೌನವಾಗಿದ್ದವು.
ಇಂದು ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಇಂದು ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ಜನರು ಓಡಾಡುತ್ತಿದ್ದಾರೆ. ಶಾಲಾ ಕಾಲೇಜುಗಳು ಆರಂಭವಾಗಿ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗದಲ್ಲಿ ದುರ್ಘಟನೆ ನಡೆದ ದಿನದಿಂದ ಮೊಕ್ಕಾಂ ಹೂಡಿದ್ದಾರೆ.
ಇಂದು ಕೂಡ ಶಿವಮೊಗ್ಗದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಯಲ್ಲಿದ್ದು ಭದ್ರತೆಯ ಭಾಗವಾಗಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶಿವಮೊಗ್ಗದಲ್ಲಿ ಇಂದು ಕೂಡ ಮದ್ಯ ಮಾರಾಟ ನಿಷೇಧ ಮುಂದುವರಿದಿದೆ. ಮೊನ್ನೆ ನಡೆದ ಘಟನೆಗೆ ಸಂಬಂಧಪಟ್ಟಂತೆ ಇನ್ನಷ್ಟು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ನಿನ್ನೆ ನಿಷೇಧಾಜ್ಞೆ ನಡುವೆ ಚಾಕು ಇರಿತ ಘಟನೆ ನಡೆದ ಭದ್ರಾವತಿಯಲ್ಲಿ ಇಂದು ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಬೇರೆಲ್ಲಾ ಅಂಗಡಿ-ಮುಂಗಟ್ಟುಗಳು ಬಂದ್ ಆಗಿವೆ. ಜನಜೀವನ ಸ್ತಬ್ಧವಾಗಿದೆ. ಜನರ ಓಡಾಟ ವಿರಳವಾಗಿದೆ. ಪೊಲೀಸ್ ಭದ್ರತೆ ಬಿಗಿಯಾಗಿದೆ. ಭದ್ರಾವತಿಯಲ್ಲಿ ಒಂದು ರೀತಿಯಲ್ಲಿ ಅಘೋಷಿತ ಬಂದ್ ವಾತಾವರಣವಿದೆ.