ಆಗಸ್ಟ್ 20 ರಿಂದ ರಾಜ್ಯಾದ್ಯಂತ ಮೂರು ದಿನಗಳ ಕಾಲ ದೇವರಾಜ ಅರಸು ಉತ್ಸವ

ರಾಜ್ಯ ಮಟ್ಟದಲ್ಲಿ ದೇವರಾಜ ಅರಸು ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭದ ಮಾದರಿಯಲ್ಲೇ ಜಿಲ್ಲಾ ಮಟ್ಟದಲ್ಲಿಯೂ ಆ. 20ರಿಂದ 23ರವರೆಗೆ ಮೂರು ದಿನಗಳ ಅರಸು ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು  ಮಾಹಿತಿ ನೀಡಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಆಗಸ್ಟ್ 20ರಂದು ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆಯನ್ನು ಆಚರಿಲಾಗುವುದು. ರಾಜ್ಯ ಮಟ್ಟದ ದೇವರಾಜ ಅರಸು ಪ್ರಶಸ್ತಿಯ ಜೊತೆಗೆ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯ ಮಟ್ಟದಲ್ಲಿ ದೇವರಾಜ ಅರಸು ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭದ ಮಾದರಿಯಲ್ಲೇ ಜಿಲ್ಲಾ ಮಟ್ಟದಲ್ಲಿಯೂ ಆ. 20ರಿಂದ 23ರವರೆಗೆ ಮೂರು ದಿನಗಳ ಅರಸು ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು  ಮಾಹಿತಿ ನೀಡಿದ್ದಾರೆ.

ರಾಜ್ಯ ಮಟ್ಟದಲ್ಲಿ ವಿಧಾನಸೌಧದ ಬ್ಯಾಕ್ವೆಂಟ್ ಸಭಾಂಗಣದಲ್ಲಿ ಮುಖ್ಯಮಂತ್ರಿಯವರಿಂದ ಸಮಾರಂಭ ನಡೆಯಲಿದೆ. ಇದೇ ವೇಳೆ ರಾಜ್ಯದ ಇತರ 30 ಜಿಲ್ಲೆಗಳಲ್ಲಿಯೂ ಜಿಲ್ಲಾ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ ನಡೆಯಲಿರುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕುಲಕಸುಬುಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ.

ಪುರಭವನದಲ್ಲಿ 20 ಮಳಿಗೆಗಳು ಈ ನಿಟ್ಟಿನಲ್ಲಿ ತೆರೆಯಲಾಗುವುದು. ದೇವರಾಜ ಅರಸು ಜಿಲ್ಲಾ ಮಟ್ಟದ ಪ್ರಶಸ್ತಿಗಾಗಿ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಸಾಧಕರೊಬ್ಬರನ್ನು ಸಮಿತಿ ಆಯ್ಕೆ ಮಾಡಲಿದೆ. ಅವರಿಗೆ ಆ. 22ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಅರಸು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಆ. 20ರಂದು ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಬಳಿಕ ಪ್ರದರ್ಶನ ಮಾರಾಟದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದು ಆ. 21ರಂದು ಮುಂದುವರಿಯಲಿದೆ. ಆ. 22ರಂದು ಸಮಾರೋಪ ಸಮಾರಂಭದಲ್ಲಿ ಈಗಾಗಲೇ ಜಿಲ್ಲೆಯ ಶಾಲೆ, ವಸತಿ ಶಾಲೆಗಳಲ್ಲಿ ದೇವರಾಜ ಅರಸು ಹೆಸರಿನಲ್ಲಿ ನಡೆಸಲಾಗುವ ಚಿತ್ರಕಲೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ಕಾರ್ಯಕ್ರಮ ಪಕ್ಷಾತೀತವಾಗಿರಲಿದೆ ಎಂದರು.    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com