ಮಡಿಕೇರಿ: ಕಳೆದ ತಿಂಗಳು ಮುಂಗಾರಿನಲ್ಲಿ ವಿಪರೀತ ಮಳೆಯಾಗಿ ಪ್ರವಾಹ ಉಂಟಾಗಿ ಹಾನಿಗೀಡಾದ ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ ತಾಲ್ಲೂಕುಗಳಿಗೆ ನಿನ್ನೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದರು.
ಈ ವೇಳೆ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಎಂಬಲ್ಲಿಗೆ ಹೋಗಿದ್ದ ವೇಳೆ ಸಿದ್ದರಾಮಯ್ಯನವರ ಕಾರಿಗೆ ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದಾರೆ. ಇದು ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು ಕಾಂಗ್ರೆಸ್-ಬಿಜೆಪಿ ಮಧ್ಯೆ ಮತ್ತೊಂದು ಮಹಾಯುದ್ಧಕ್ಕೆ ಕಾರಣವಾಗುತ್ತಿದೆ. ಸಿದ್ದರಾಮಯ್ಯನವರು ಮುಸ್ಲಿಂ ಏರಿಯಾ ಹೇಳಿಕೆ ನೀಡಿದ್ದೇ ಹಿಂದೂ ಕಾರ್ಯಕರ್ತರ ಆಕ್ರೋಶ, ಪ್ರತಿಭಟನೆಗೆ ಕಾರಣವಾಗಿದೆ.
9 ಮಂದಿ ಬಂಧನ, ಜಾಮೀನು ಮೇಲೆ ಬಿಡುಗಡೆ: ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ಇದುವರೆಗೆ 9 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಬಿಟ್ಟಿದ್ದಾರೆ. ಬಂಧಿತರು ಬಿಜೆಪಿ ಕಾರ್ಯಕರ್ತರು ಎಂದು ಗೊತ್ತಾದ ಕೂಡಲೇ ಶಾಸಕರಾದ ಅಪ್ಪಚ್ಚು ರಂಜನ್, ಕೆ ಜಿ ಬೋಪಯ್ಯ ಕುಶಾಲನಗರ ಪೊಲೀಸ್ ಠಾಣೆಗೆ ರಾತ್ರೋರಾತ್ರಿ ದೌಡಾಯಿಸಿದರು. ತಡರಾತ್ರಿ 9 ಜನರ ಮೇಲೆ ಎಫ್‍ಐಆರ್ ದಾಖಲಿಸಿ, ಮಧ್ಯರಾತ್ರಿ 2 ಗಂಟೆಗೆ ಜಡ್ಜ್ ಮುಂದೆ ಪೊಲೀಸರು ಹಾಜರುಪಡಿಸಿದರು. ಕೊನೆಗೆ ಶಾಸಕರು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿ 9 ಮಂದಿಗೆ ಜಾಮೀನು ಕೊಡಿಸಿದ್ದಾರೆ.
ಹಾಸನದಲ್ಲಿಯೂ ಪ್ರತಿಭಟನೆ ಬಿಸಿ: ಮಡಿಕೇರಿಯಿಂದ ಮತ್ತೊಂದು ಪ್ರವಾಹದಿಂದ ವಿಪರೀತ ಹಾನಿಗೀಡಾಗಿರುವ ಜಿಲ್ಲೆ ಚಿಕ್ಕಮಗಳೂರಿಗೆ ಹೊರಟ ಸಿದ್ದರಾಮಯ್ಯನವರಿಗೆ ಮಾರ್ಗ ಮಧ್ಯೆ ಹಾಸನದಲ್ಲಿ ಕೂಡ ಜನರು ಘೋಷಣೆ ಕೂಗಿ ವಿರೋಧ ವ್ಯಕ್ತಪಡಿಸಿದರು. ಸಕಲೇಶಪುರದ ಆನೆಮಹಲ್ ಬಳಿ ಭಜರಂಗದಳ ಕಾರ್ಯಕರ್ತರು ವೀರ ಸಾವರ್ಕರ್ ಫೋಟೋ ಹಿಡಿದು ಘೋಷಣೆ ಕೂಗಿದರು. ಇದರಿಂದಾಗಿ ಸಿದ್ದರಾಮಯ್ಯ ಕಾರು ಕೆಲಕಾಲ ನಿಲ್ಲುವಂತಾಗಿತ್ತು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದರು.
ಬಂಧಿತರು ಕಾರಿಗೆ ಮೊಟ್ಟೆ ಎಸೆದ ಘಟನೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಬಿಜೆಪಿಯವರ ಪೂರ್ವ ನಿಯೋಜಿತ ಕೃತ್ಯವಾಗಿದ್ದು ಹಣ ಕೊಟ್ಟು ಸ್ಥಳಕ್ಕೆ ಕರೆಸಿಕೊಂಡು ಮೊಟ್ಟೆ ಎಸೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯನವರಿಗೆ ಡಿ ಕೆ ಶಿವಕುಮಾರ್, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಂದು ಚಿಕ್ಕಮಗಳೂರಿಗೆ ಭೇಟಿ: ಅವರು ಇಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿಯಲ್ಲಿ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ. ಇಲ್ಲಿ ಪ್ರತಿಭಟನೆ ವ್ಯಕ್ತವಾಗಿ ಅಹಿತಕರ ಘಟನೆ ನಡೆಯುವ ಸಾಧ್ಯತೆಯಿರುವುದರಿಂದ ಎಎಸ್ ಪಿಯನ್ನು ನಿಯೋಜಿಸಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರತಿಭಟನೆಗೆ ಕಾಂಗ್ರೆಸ್ ಸಜ್ಜು: ಮೊಟ್ಟೆ ಎಸೆತ ಪ್ರಕರಣವನ್ನು ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಗಂಭೀರವಾಗಿ ತೆಗೆದುಕೊಂಡು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ. ಆಗಸ್ಟ್ 26ರಂದು ಮಡಿಕೇರಿ ಚಲೋ ಹಮ್ಮಿಕೊಂಡು ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮೊಟ್ಟೆ ಎಸೆತ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement