ನನ್ನ ವಿರುದ್ಧ ಆರೋಪಕ್ಕೆ ಸಾಕ್ಷಿ, ದಾಖಲೆ ಕೊಡಬೇಕು, ಇಲ್ಲದಿದ್ದರೆ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ: ಸಚಿವ ಮುನಿರತ್ನ

ತಮ್ಮ ವಿರುದ್ಧ 40% ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಗರಂ ಆಗಿದ್ದಾರೆ. 
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಯ್ಯ, ತೋಟಗಾರಿಕೆ ಸಚಿವ ಎನ್ ಮುನಿರತ್ನ (ಸಂಗ್ರಹ ಚಿತ್ರ)
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಯ್ಯ, ತೋಟಗಾರಿಕೆ ಸಚಿವ ಎನ್ ಮುನಿರತ್ನ (ಸಂಗ್ರಹ ಚಿತ್ರ)

ಬೆಂಗಳೂರು: ತಮ್ಮ ವಿರುದ್ಧ 40% ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಗರಂ ಆಗಿದ್ದಾರೆ. 

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು ಗುತ್ತಿಗೆದಾರರಲ್ಲಿ ನೀವು ಹಣ ಕಲೆಕ್ಟ್ ಮಾಡಿಕೊಂಡು ಬಾರದಿದ್ದರೆ ಕಾರ್ಯನಿರ್ವಹಣಾ ಎಂಜಿನಿಯರ್ ಗಳನ್ನು ಸಸ್ಪೆಂಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾರಂತೆ ಎಂದರು. ಆಗ ಮಾಧ್ಯಮ ಪ್ರತಿನಿಧಿಗಳು ಯಾರು ಆ ಜಿಲ್ಲಾ ಉಸ್ತುವಾರಿ ಸಚಿವರು, ಹೆಸರು ಹೇಳಿ ಎಂದು ಒತ್ತಾಯಿಸಿದಾಗ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಎಂದರು.

ಮೂರು ವರ್ಷಗಳಿಂದ ಕೆಲಸ ಮಾಡದಿದ್ದರೆ ಮೆಷಿನ್ ತಂದು ಪರೀಕ್ಷೆ ಮಾಡಿಸುತ್ತೇವೆ ಎಂದು ಸಹ ಗುತ್ತಿಗೆದಾರರಿಗೆ ಬೆದರಿಕೆ ಹಾಕುತ್ತಾರಂತೆ. ಮೂರು ವರ್ಷದಿಂದ ಇನ್ನೂ ಪೇಮೆಂಟ್ ಮಾಡಿಲ್ಲ, ಮುನಿರತ್ನ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ತೋರಿಸಲಿ ನೋಡೋಣ ಎಂದು ಸವಾಲು ಹಾಕಿದ್ದರು.

ಇದಕ್ಕೆ ಗರಂ ಆಗಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿರುವ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ, ಕೆಂಪಣ್ಣ ಏನೇ ಆರೋಪ ಮಾಡಬಹುದು, ಅದಕ್ಕೆ ಸಾಕ್ಷಿ ಇದೆಯೇ, ಇದ್ದರೆ ದಾಖಲೆ ಕೊಡಬೇಕು. ಇಲ್ಲದಿದ್ದರೆ ನಾನು ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಚಿವ ವಿ.ಮುನಿರತ್ನ ವಿರುದ್ಧ ಕೆಂಪಣ್ಣ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಸಾಕ್ಷಿ ಕೊಡಲಿ. ನನ್ನ ಬಳಿ ಯಾರು ಬಂದಿದ್ದಾರೆ, ನಾನು ಏನು ಹೇಳಿದ್ದೇನೆ. ಎಲ್ಲವನ್ನೂ ನಾನೇ ತನಿಖೆ ಮಾಡಿಸುತ್ತೇನೆ, ಇದನ್ನ ಬಿಡಲ್ಲ. ಸರ್ಕಾರ, ಸಚಿವರ ಬಗ್ಗೆ ಆರೋಪ ಮಾಡಿದರೆ ಸುಮ್ಮನಿರಲ್ಲ. ಇದನ್ನ ಇಲ್ಲಿಗೆ ಬಿಡಲ್ಲ, ಕಾನೂನು ಹೋರಾಟ ಮಾಡ್ತೇನೆ. ನನ್ನ ತಪ್ಪಿದ್ದರೆ ಏನು ಶಿಕ್ಷೆ ಕೊಟ್ಟರೂ ನಾನು ಅನುಭವಿಸುತ್ತೇನೆ ಎಂದು ಸಚಿವ ಮುನಿರತ್ನ ಗುಡುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com