ರಾಜ್ಯ ಸರ್ಕಾರದಲ್ಲಿ ಸಿಎಂ, ಸಚಿವರು, ಶಾಸಕರಿಂದ 40% ಕಮಿಷನ್ ಗೆ ಬೇಡಿಕೆ: ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತೊಮ್ಮೆ ಆರೋಪ

ರಾಜ್ಯ ಬಿಜೆಪಿ ಸರ್ಕಾರದ ಸಂಪೂರ್ಣ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಸಚಿವರುಗಳು, ಶಾಸಕರು ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಮತ್ತೊಮ್ಮೆ 40% ಕಮಿಷನ್ ಆರೋಪ ಗುತ್ತಿಗೆದಾರರಿಂದ ಕೇಳಿಬರುತ್ತಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ಸಂಪೂರ್ಣ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಸಚಿವರುಗಳು, ಶಾಸಕರು ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮತ್ತೊಮ್ಮೆ ಪ್ರಧಾನಿ ಮೋದಿಗೆ ಪತ್ರ ಬರೆಯುವುದಾಗಿ ಕೆಂಪಣ್ಣ ಗುಡಿಗಿದ್ದಾರೆ. ಕೋಲಾರ ಜಿಲ್ಲೆ ಉಸ್ತುವಾರಿ ಸಚಿವ ಮುನಿರತ್ನ ಅವರ ಹೆಸರನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿರುವ ಗುತ್ತಿಗೆದಾರರ ಕೆಲಸ ಮಂಜೂರು ಆಗಬೇಕೆಂದರೆ ಲಂಚ ಕೊಡಬೇಕು, ಇಲ್ಲದಿದ್ದರೆ ಗುತ್ತಿಗೆ ರದ್ದು ಮಾಡಲಾಗುವುದು,ಹಣ ಕಲೆಕ್ಟ್ ಮಾಡಿ ತನ್ನಿ ಎಂದು ತೋಟಗಾರಿಕೆ ಸಚಿವ ಮುನಿರತ್ನ ನೇರವಾಗಿ ಬೆದರಿಕೆ ಹಾಕುತ್ತಾರೆ ಎಂದು ಕೆಂಪಣ್ಣ ದೂರಿದ್ದಾರೆ.

ಸರ್ಕಾರದ ಸಚಿವರು, ಶಾಸಕರು ಲಂಚ, ಭ್ರಷ್ಟಾಚಾರದಲ್ಲಿ ನಂಬರ್ 1, 2 ಸ್ಥಾನದಲ್ಲಿದ್ದಾರೆ. ಗುತ್ತಿಗೆದಾರರಿಂದ ಕಾಮಗಾರಿ ಹಣದಲ್ಲಿ ಶೇಕಡಾ 40ರಷ್ಟು ಲಂಚ ಪಡೆಯುತ್ತಾರೆ. ಅವರಿಗೆ ಇಷ್ಟೊಂದು ಲಂಚ ಹೋದರೆ ಉಳಿದ ಹಣದಲ್ಲಿ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಲು ಹೇಗೆ ಸಾಧ್ಯ, ಗುತ್ತಿಗೆದಾರರು ಜನಪ್ರತಿನಿಧಿಗಳ ಕಿರುಕುಳದಿಂದ ನಲುಗಿ ಹೋಗುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ.

ಒಂದು ವರ್ಷ 2 ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ಸಿಎಂ ಮಾತಿಗೂ ಬೆಲೆ ಇಲ್ಲದಂತಾಗಿದೆ. ಮಾನ, ಮರ್ಯಾದೆ ಇಲ್ಲದ ಜನ ಪ್ರತಿನಿಧಿಗಳು ಇವರು. ಇನ್ನೂ 22 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇದೆ. ಕೆಲವರದು 3 ವರ್ಷಗಳಿಂದ ಬಾಕಿ ಇದೆ. ನನ್ನ ಜೀವನದಲ್ಲಿ ನೋಡಿದ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿದೆ. ಇದರಲ್ಲಿ ಬೊಮ್ಮಾಯಿ ಸೇರಿದಂತೆ ಎಲ್ಲರೂ ಇದ್ದಾರೆ. ಯಾರಿಗೂ ರ‍್ಯಾಂಕಿಂಗ್ ಕೊಡೋಕೆ ಆಗಲ್ಲ ಎಂದು ಆರೋಪಿಸಿದರು.

ಪ್ರಧಾನಿಗೆ ಪತ್ರ: ಇದೀಗ ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಂದು ಪತ್ರ ಬರೆಯಲು ಗುತ್ತಿಗೆದಾರರ ಸಂಘ ಮುಂದಾಗಿದೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಭ್ರಷ್ಟಾಚಾರದ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ದೇಶಕ್ಕೆ ಭ್ರಷ್ಟಾಚಾರ ದೊಡ್ಡ ಮಾರಕ, ಶತ್ರು ಎಂದಿರುವ ಮೋದಿ ಅವರ ಮಾತನ್ನೇ ಉಲ್ಲೇಖಿಸಿ‌ ಅಭಿನಂದನೆ ಪತ್ರ ಬರೆಯಲು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮುಂದಾಗಿದ್ದಾರೆ.

ಗುತ್ತಿಗೆದಾರರು ದೂರು ನೀಡಿ ಒಂದೂವರೆ ವರ್ಷವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೆಂಪಣ್ಣ ಪ್ರಸ್ತಾಪಿಸಲಿದ್ದಾರೆ. ಈ ಮೂಲಕ ಮತ್ತೊಮ್ಮೆ ರಾಜ್ಯ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಮತ್ತೆ ಮುಂಚೂಣಿಗೆ ತರಲು ಗುತ್ತಿಗೆದಾರರ ಸಂಘ ಮುಂದಾಗಿದೆ. 

ಸಿದ್ದರಾಮಯ್ಯ ಭೇಟಿ: ಈ ಮಧ್ಯೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿರುವ ಗುತ್ತಿಗೆದಾರರ ಸಂಘದ ನಿಯೋಗ ಚರ್ಚೆ ನಡೆಸಿದೆ. ಸಿದ್ದರಾಮಯ್ಯಗೆ ನಾವು ಎಲ್ಲಾ ಮಾಹಿತಿ ಕೊಟ್ಟಿದ್ದೇವೆ. ಸದನದಲ್ಲಿ ಅದನ್ನು ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ ನಾನು ಯಾವುದೇ ದಾಖಲೆಗಳನ್ನು ಸಿದ್ದರಾಮಯ್ಯಗೆ ಕೊಟ್ಟಿಲ್ಲ. ನ್ಯಾಯಾಂಗ ತನಿಖೆ ಮಾಡಿದರೆ ಮಾತ್ರ ದಾಖಲೆ ಕೊಡುತ್ತೇವೆ. ದಾಖಲೆಯನ್ನು ನಾನು ಬಹಿರಂಗ ಪಡಿಸಿದರೆ ಗುತ್ತಿಗೆದಾರರಿಗೆ ತೊಂದರೆ ಆಗುತ್ತದೆ ಎಂಬ ಭಯ ಇದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com