ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ: ದಾಖಲೆ ನೀಡುವಂತೆ ಗುತ್ತಿಗೆದಾರರ ಸಂಘಕ್ಕೆ ಕೇಂದ್ರ ಸರ್ಕಾರ ಸೂಚನೆ

ಯೋಜನೆ ಮಂಜೂರಾತಿ ಪಡೆಯಲು ಶೇ 40ರಷ್ಟು ಕಮಿಷನ್‌ ನೀಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಆರೋಪ ಮಾಡಿರುವುದನ್ನು ಗಂಭೀರವಾಗಿ ಪರಿಣಗಣಿಸಿರುವ ಕೇಂದ್ರ ಸರ್ಕಾರವು, ಈ ಸಂಬಂಧ ದಾಖಲೆಗಳನ್ನು ನೀಡುವಂತೆ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಸೂಚನೆ ನೀಡಿದೆ.
ಶಿವರಾಮ್ ಹೆಬ್ಬಾರ್ (ಸಂಗ್ರಹ ಚಿತ್ರ)
ಶಿವರಾಮ್ ಹೆಬ್ಬಾರ್ (ಸಂಗ್ರಹ ಚಿತ್ರ)

ಬೆಂಗಳೂರು: ಯೋಜನೆ ಮಂಜೂರಾತಿ ಪಡೆಯಲು ಶೇ 40ರಷ್ಟು ಕಮಿಷನ್‌ ನೀಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಆರೋಪ ಮಾಡಿರುವುದನ್ನು ಗಂಭೀರವಾಗಿ ಪರಿಣಗಣಿಸಿರುವ ಕೇಂದ್ರ ಸರ್ಕಾರವು, ಈ ಸಂಬಂಧ ದಾಖಲೆಗಳನ್ನು ನೀಡುವಂತೆ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಸೂಚನೆ ನೀಡಿದೆ. 

ಕೇಂದ್ರ ಗೃಹ ಸಚಿವಾಲಯ ಈ ಸೂಚನೆಯನ್ನು ನೀಡಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಸೂಚನೆಯನ್ನು ಕಾರ್ಮಿಕ ಸಚಿವ ಎ ಶಿವರಾಮ ಹೆಬ್ಬಾರ್ ಕೂಡ ಶಿವಮೊಗ್ಗದಲ್ಲಿ ದೃಢಪಡಿಸಿದ್ದು, ಇದು ಉತ್ತಮ ನಡೆ ಎಂದು ಹೇಳಿದ್ದಾರೆ. 

ಶುಕ್ರವಾರ ನಾನು ಮೈಸೂರಿನಲ್ಲಿದ್ದೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಂಡು ಕೆಲವರು ಚಾಮರಾಜಪೇಟೆಯಲ್ಲಿರುವ ನನ್ನ ಕಚೇರಿಗೆ ಬಂದಿದ್ದಾರೆ. ನನ್ನ ಸಿಬ್ಬಂದಿಗಳು ಅವರ ಗುರುತಿನ ಚೀಟಿ ಕೇಳಿದ್ದು, ಗುರುತಿನ ಚೀಟಿ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದೆ. ಇಂದು 11.30ಕ್ಕೆ ದಾಖಲೆಗಳೊಂದಿಗೆ ಎಲ್ಲಿಗೆ ಬರಬೇಕೆಂದು ಕೇಳಿದ್ದೆ. ಆದರೆ, ಈ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆಯೇ, ಮತ್ತೊಮ್ಮೆ ನನ್ನನ್ನು ಸಂಪರ್ಕಿಸುವುದಾಗಿ ಹೇಳಿದ್ದರು ಎಂದು ಕೆಂಪಣ್ಣ ಅವರು ಹೇಳಿದ್ದಾರೆ. 

ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿತ್ತು. ಪ್ರಧಾನಮಂತ್ರಿ ಕಚೇರಿಯ ಕೆಲ ಅಧಿಕಾರಿಗಳು ನನ್ನನ್ನು ಕರೆದು ವಿವರಗಳನ್ನು ಕೇಳಿದ್ದರು. ಆದರೆ, ಇದೀಗ ಗೃಹ ಇಲಾಖೆಯ ಅಧಿಕಾರಿಗಳು ಸಂಪರ್ಕಿಸಿದ್ದಾರೆಂದು ತಿಳಿಸಿದ್ದಾರೆ. 

ಕೆಂಪಣ್ಣ ರಾಜ್ಯದಲ್ಲಿನ ಪ್ರಮುಖ ಇಲಾಖೆಗಳಲ್ಲಿನ ಶೇ.40ರಷ್ಟು ಕಮಿಷನ್ ಅವ್ಯವಹಾರದ ಬಗ್ಗೆ ಆರೋಪಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಈ ನಡುವೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಭಾರೀ ಸದ್ದು ಮಾಡಿತ್ತು. ಇದೀಗ ಕೇಂದ್ರ ಗೃಹ ಇಲಾಖೆಯೂ ಕೆಂಪಣ್ಣ ಅವರಿಂದ ದಾಖಲೆ ಕೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ತಮ್ಮ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆ ಕಾಮಗಾರಿಗೆ ಸಂಬಂಧಿಸಿದಂತೆ ಕೆಂಪಣ್ಣ ಸುಳ್ಳು ಆರೋಪ ಮಾಡುತ್ತಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆಂಪಣ್ಣ ಅವರು, ಸುಧಾಕರ್ ಅವರು ಯಾವಾಗ ಮಾನನಷ್ಟ ಮೊಕದ್ದಮೆ ಹೂಡುತ್ತಾರೆಂದು ಕಾಯುತ್ತಿದ್ದೇನೆ. ಅವರು ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದಂತೆಯೇ ಇತ್ತ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com