ಶಿಕ್ಷಣ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಸಚಿವ ನಾಗೇಶ್ ಅವರನ್ನು ತೆಗೆದುಹಾಕಿ: ಪ್ರಧಾನಿ ಮೋದಿಗೆ ಪತ್ರ

ಗುತ್ತಿಗೆದಾರರ ಸಂಘದಿಂದ ರಾಜ್ಯ ಸರ್ಕಾರ ವಿರುದ್ಧ ಕೇಳಿಬಂದಿದ್ದ ಕಮಿಷನ್ ದಂಧೆ ಆರೋಪ ಇದೀಗ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಕಾಲಿಟ್ಟಿದೆ.
ಶಿಕ್ಷಣ ಸಚಿವ ಬಿ ಸಿ ನಾಗೇಶ್
ಶಿಕ್ಷಣ ಸಚಿವ ಬಿ ಸಿ ನಾಗೇಶ್
Updated on

ಬೆಂಗಳೂರು: ಗುತ್ತಿಗೆದಾರರ ಸಂಘದಿಂದ ರಾಜ್ಯ ಸರ್ಕಾರ ವಿರುದ್ಧ ಕೇಳಿಬಂದಿದ್ದ ಕಮಿಷನ್ ದಂಧೆ ಆರೋಪ ಇದೀಗ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಕಾಲಿಟ್ಟಿದೆ.

ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ (RUPSA) ಮತ್ತು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳು (KAMS) ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಈ ಕುರಿತು ಪತ್ರ ಬರೆದಿದೆ. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಕಳೆದೆರಡು ವರ್ಷಗಳಿಂದ ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಾಲೆಗಳ ಮಾನ್ಯತೆ ನವೀಕರಣ, ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಅನುಸರಣೆ ಪ್ರಮಾಣಪತ್ರಗಳು, ಶಿಕ್ಷಕರ ನಿರಂತರ ವರ್ಗಾವಣೆ, ಧಾರ್ಮಿಕ ವಿಷಯಗಳ ಪ್ರಚೋದನೆ, ಶಾಲೆಗಳಿಗೆ ಕಿರುಕುಳ ಮತ್ತು ಇಲಾಖೆ ಅಧಿಕಾರಿಗಳಿಂದ ಲಂಚದ ಬೇಡಿಕೆಗಳನ್ನು ಸಂಘಗಳು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿವೆ.

ಇಲಾಖೆಯು 3 ಜನರ ಸಮಿತಿಗಳನ್ನು ನೇಮಿಸುವ ಹೊಸ ವಿಧಾನವನ್ನು ಪ್ರಾರಂಭಿಸಿದೆ. ಈ ತಂಡಗಳು ಪರಿಶೀಲನೆ ನೆಪದಲ್ಲಿ ಶಾಲೆಗಳಿಗೆ ಭೇಟಿ ನೀಡುತ್ತವೆ. ಅವರಿಗೆ ಲಂಚ ನೀಡದಿದ್ದರೆ, ಕೆಲವು ಲೋಪದೋಷಗಳನ್ನು ಕಂಡುಕೊಂಡು ಶಾಲೆಗಳಿಗೆ ಕಿರುಕುಳ ನೀಡಲು ಪ್ರಾರಂಭಿಸುತ್ತವೆ ಎಂದು RUPSA ಪತ್ರದಲ್ಲಿ ಆರೋಪಿಸಿದೆ.

ಅವೈಜ್ಞಾನಿಕ, ಅತಾರ್ಕಿಕ, ತಾರತಮ್ಯ ಮತ್ತು ದೂರು-ರಹಿತ ಮಾನದಂಡಗಳನ್ನು ಶಾಲೆಗಳಿಗೆ ಅನ್ವಯಿಸಲಾಗಿದೆ. ಶಿಕ್ಷಣ ಸಚಿವಾಲಯವು ತಾಳ್ಮೆ ಕಳೆದುಕೊಂಡಿದೆ. ಶಾಲೆಗಳ ವಾಸ್ತವಿಕ ದಯನೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದೆ. ಬಿಜೆಪಿ ಸರ್ಕಾರದ ಇಬ್ಬರು ಶಿಕ್ಷಣ ಸಚಿವರುಗಳು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿದ್ದಾರೆ. ಇದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪೋಷಕರ ಮೇಲೆ ಶುಲ್ಕದ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ದುಬಾರಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. 

ಆರ್‌ಟಿಇ ಮರುಪಾವತಿಯಲ್ಲಿ ವಿಳಂಬ, ಸರ್ಕಾರ ನಿಗದಿತ ಪಠ್ಯಪುಸ್ತಕಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವಲ್ಲಿ ವಿಫಲತೆ ಮತ್ತು ಪ್ರತಿ ಹಂತದಲ್ಲೂ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಇಲಾಖೆ ವಿಫಲವಾಗಿದೆ ಎಂದು KAMS ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಸಾಕ್ಷಿ ಕೊಡಿ ಎಂದ ಸಚಿವರು: ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಸಾಕ್ಷಿ ಕೊಡಿ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕೇಳುತ್ತಿದ್ದಾರೆ. ಸರಿಯಾದ ವಿಧಾನಗಳನ್ನು ಅನುಸರಿಸಿದರೆ ಭ್ರಷ್ಟಾಚಾರ ಸಮಸ್ಯೆಯನ್ನು ಬಗೆಹರಿಸಬಹುದು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಬಹುದು. ಲಂಚ ಅಥವಾ ಭ್ರಷ್ಟಾಚಾರ ಕಂಡುಬಂದರೆ ನೇರವಾಗಿ ಕರ್ನಾಟಕ ಲೋಕಾಯುಕ್ತಕ್ಕೆ ಹೋಗಿ ಇಲ್ಲವೇ ಶಿಕ್ಷಣ ಇಲಾಖೆಯಲ್ಲಿ ದೂರು ದಾಖಲಿಸಿ ಎಂದು ಹೇಳಿದರು.

ಕೆಂಪಣ್ಣ ಮಾನನಷ್ಟ ಮೊಕದ್ದಮೆ ಎದುರಿಸುತ್ತಾರೆ: ಸರ್ಕಾರ, ಸಚಿವರು, ಶಾಸಕರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಕೆಂಪಣ್ಣನವರ ವಿರುದ್ಧ ಬಿಜೆಪಿ ಶಾಸಕರು ಮಾನನಷ್ಟ ಮೊಕದ್ದಮೆ ಹೂಡುತ್ತಾರೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com