40 ಪರ್ಸೆಂಟ್ ಕಮಿಷನ್ ಆರೋಪ; ಸಾಕ್ಷಿ ಇದ್ದರೆ ಕ್ರಮ, ಇಲ್ಲದಿದ್ದರೆ ಮಾನನಷ್ಠ ಮೊಕದ್ದಮೆ: ಸಚಿವ ಬಿ.ಸಿ. ನಾಗೇಶ್

ಶೇಕಡ 40ರಷ್ಟು ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿರುವ ಪ್ರಕರಣಗಳಿಗೆ ಸಾಕ್ಷಿ ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸೋಮವಾರ ಹೇಳಿದ್ದಾರೆ.
ಶಿಕ್ಷಣ ಸಚಿವ ಬಿ ಸಿ ನಾಗೇಶ್
ಶಿಕ್ಷಣ ಸಚಿವ ಬಿ ಸಿ ನಾಗೇಶ್

ಬೆಂಗಳೂರು: ಶೇಕಡ 40ರಷ್ಟು ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿರುವ ಪ್ರಕರಣಗಳಿಗೆ ಸಾಕ್ಷಿ ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸೋಮವಾರ ಹೇಳಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಆರೋಪಿಸಿದವರೇ ನೇರ ದೂರು ಕೊಡದೇ ಮಾಧ್ಯಮಗಳ ಮೂಲಕ ಸಾಕ್ಷಿ ನೀಡಿದರೂ ಕ್ರಮ ತೆಗೆದುಕೊಳ್ಳುತ್ತೇನೆ. ಇವತ್ತು ಕೂಡ ಆಯುಕ್ತರಿಗೆ ಸೂಚನೆ‌ ಕೊಟ್ಟಿದ್ದು, ಆರೋಪ ಮಾಡಿದ ವ್ಯಕ್ತಿ ದೂರು ಕೊಟ್ಟರೆ ಸಾಕ್ಷಿ ಸಂಗ್ರಹಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ ಎಂದರು.

ಜವಾಬ್ದಾರಿಯುತ ವ್ಯಕ್ತಿ ಆರೋಪ ಮಾಡಿದ್ದರೆ ಮಹತ್ವ ಇರುತ್ತದೆ. ಆಧಾರ ರಹಿತವಾಗಿ ಮಾತನಾಡಿರುವ ವ್ಯಕ್ತಿ ರೆಸ್ಪಾನ್ಸಿಬಲ್  ಅಲ್ಲ. ಆರೋಪ ಮಾಡಿರುವವರ ವಿರುದ್ದ ನಾನು ಸದ್ಯದಲ್ಲೇ ಮಾನನಷ್ಠ ಮೊಕದ್ದಮೆ ಹಾಕುತ್ತೇನೆ. ಸಾಕ್ಷಿ ಕೊಟ್ಟರೆ ಥರ್ಡ್ ಪಾರ್ಟಿ ಇನ್ವೆಸ್ಟಿಗೇಷನ್ ಮಾಡಿಸ್ತೀನಿ ಎಂದು ಹೇಳಿದರು.

ಅಕ್ರಮವಾಗಿ ಶಾಲೆ ನಡೆಸೋರಿಗೆ ಭಯ ಶುರುವಾಗಿದೆ. ಇರೆಗ್ಯುಲರ್ ಶಾಲೆ ನಡೆಸುವವರ ಪಟ್ಟಿ ಕೊಡಿ ಎಂದು ಸುತ್ತೋಲೆ ಹೋಗಿದೆ. ಈ ಕಾರಣದಿಂದ ಬ್ಲಾಕ್‌ಮೇಲ್ ಮಾಡುವ ತಂತ್ರ ಕೆಲವರದ್ದು. ಸರಿಯಾಗಿ ಶಾಲೆ ನಡೆಸೋರು ದಾಖಲೆ ಕೊಡುತ್ತಿದ್ದಾರೆ. ಬೇಜವಬ್ದಾರಿ ಇರೋರು ಈ ರೀತಿ ಬ್ಲಾಕ್‌ಮೇಲ್ ಮಾಡ್ತಾರೆ ಎಂದು ಆರೋಪಗಳ ಹಿನ್ನೆಲೆ ವಿವರಿಸಿದರು

ಸಾವರ್ಕರ್ ಪಠ್ಯ  ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಒಂದಷ್ಟು ಜನರಿಗೆ ಸಾವರ್ಕರ್‌ ಬಗ್ಗೆ ಅಲರ್ಜಿ ಉಂಟಾಗಿದೆ. ಸಾವರ್ಕರ್‌‌ನ ಟೀಕಿಸಿದ್ರೆ ಒಂದಷ್ಟು‌ ಜನರಿಗೆ ಖುಷಿ. ಅವಹೇಳನ‌ ಮಾಡ್ತಿರೋದು ಪಠ್ಯವನ್ನಲ್ಲ, ಸಾವರ್ಕರ್‌ ಅವರನ್ನು ಎಂದರು.

ಬರಗೂರು ರಾಮಚಂದ್ರಪ್ಪ‌ ಅವರ ವಿರುದ್ದ ಬಿಜೆಪಿ ದೂರು ಕೊಟ್ಟಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ, ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com