ಪ್ರತ್ಯೇಕ ಮುಸ್ಲಿಂ ಮಹಿಳಾ ಕಾಲೇಜು ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಿಲ್ಲ, ಅದು ವಕ್ಫ್ ಬೋರ್ಡ್ ಅಧ್ಯಕ್ಷರ ವೈಯಕ್ತಿಕ ಹೇಳಿಕೆಯಷ್ಟೆ: ಸಿಎಂ ಬೊಮ್ಮಾಯಿ ಅಚ್ಚರಿ ಹೇಳಿಕೆ

ರಾಜ್ಯದ 10 ಕಡೆಗಳಲ್ಲಿ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಧರ್ಮ ದಂಗಲ್ ಆರಂಭವಾಗುವ ಸ್ಪಷ್ಟ ಸೂಚನೆ ಸಿಕ್ಕಿತ್ತು. ಹಿಂದೂ ಸಂಘಟನೆಗಳು ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದವು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ 10 ಕಡೆಗಳಲ್ಲಿ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಧರ್ಮ ದಂಗಲ್ ಆರಂಭವಾಗುವ ಸ್ಪಷ್ಟ ಸೂಚನೆ ಸಿಕ್ಕಿತ್ತು. ಹಿಂದೂ ಸಂಘಟನೆಗಳು ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದವು. ಸರ್ಕಾರದ ನಿರ್ಧಾರಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಿದ್ದವು.

ಈ ಬಗ್ಗೆ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಈ ವಿಷಯ ಸರ್ಕಾರದ ಮಟ್ಟದಲ್ಲಿ ಚರ್ಚೆಯೇ ಆಗಿಲ್ಲ, ಇದು ಸರ್ಕಾರದ ನಿಲುವು ಅಲ್ಲ, ಈ ಬಗ್ಗೆ ಚರ್ಚೆ ಆಗಿಲ್ಲ. ವಕ್ಫ್ ಬೋರ್ಡ್ ಅಧ್ಯಕ್ಷರು ಹೇಳಿರುವುದು ಅವರ ವೈಯಕ್ತಿಕ ಹೇಳಿಕೆಯಷ್ಟೇ, ಸರ್ಕಾರ ಏನು ನಿರ್ಧಾರ ಮಾಡುವುದಿದ್ದರೂ ಪರಾಮರ್ಶೆ ಮಾಡಿ ನಿರ್ಧರಿಸುತ್ತದೆ ಎಂಬ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ.

ಪ್ರತ್ಯೇಕ ಮುಸ್ಲಿ ಮಹಿಳೆಯರಿಗೆ ಕಾಲೇಜು ಸ್ಥಾಪನೆ ಕುರಿತು ವಿವಾದವೆದ್ದ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯಿತೇ ಎಂಬ ಸಂದೇಹ ಮುಖ್ಯಮಂತ್ರಿಗಳ ಮಾತಿನಿಂದ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಮುಸ್ಲಿಂ ಯುವತಿಯರಿಗೆ ಪ್ರತ್ಯೇಕ ಕಾಲೇಜು: ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಂದಿನ ತಿಂಗಳು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ನಿರೀಕ್ಷೆಯಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್‌ ಲಕ್ಕಿಸ್ಟಾರ್‌ ಹೇಳಿದ್ದರು. 

ನವೆಂಬರ್ 28 ರಂದು ಮಂಗಳೂರಿನಲ್ಲಿ ಮಾತನಾಡಿದ್ದ ಅವರು, ಮೂರು ತಿಂಗಳ ಹಿಂದೆ, ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಸರ್ಕಾರದಿಂದ ಇದಕ್ಕೆ ಅನುಮೋದನೆಯೂ ದೊರೆತಿತ್ತು. ಪ್ರತಿ ಕಾಲೇಜಿಗೆ 2.50 ಕೋಟಿ ರು.ಅನುದಾನವನ್ನೂ ಮೀಸಲಿರಿಸಲಾಗಿದ್ದು, ವಕ್ಫ್ ಬೋರ್ಡ್‌ಗೆ ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಈ ವೆಚ್ಚವನ್ನು ಭರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದರು. 

ಎಲ್ಲೆಲ್ಲಿ ಕಾಲೇಜು ಸ್ಥಾಪನೆ?: ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್‌ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭಿಸಲಾಗುತ್ತದೆ ಎಂದು ಹೇಳಲಾಗಿತ್ತು. 

ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಮುಸ್ಲಿಂ ಹೆಣ್ಣು ಮಕ್ಕಳಿಗಾಗಿಯೇ 10 ಹೊಸ ಕಾಲೇಜುಗಳನ್ನು ನಿರ್ಮಿಸುವ ನಿರ್ಧಾರಕ್ಕೆ ಕರ್ನಾಟಕದಲ್ಲಿ ವಿವಾದ ಭುಗಿಲೆದ್ದಿದ್ದು, ವ್ಯಾಪಕ ಪ್ರತಿಭಟನೆಯ ಎಚ್ಚರಿಕೆಯನ್ನು ಹಿಂದೂ ಸಂಘಟನೆಗಳು ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com