
ಮೈಸೂರಿನ ಕೊಳಚೆ ಜಮೀನಿನ ಬಳಿ ಮೊಸಳೆ ಕಾಣಿಸಿಕೊಂಡಿದೆ (ಸಂಗ್ರಹ ಚಿತ್ರ)
ಮೈಸೂರು: ರಾಜ್ಯಾದ್ಯಂತ ಚಿರತೆ ಸುದ್ದಿಯ ನಡುವೆಯೇ ಇತ್ತ ಅರಮನೆ ನಗರಿ ಮೈಸೂರಿನಲ್ಲಿ ಮೊಸಳೆಗಳ ಕುರಿತ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.
ಹೌದು.. ‘ಅರಮನೆಗಳ ನಗರಿ ಮೈಸೂರಲ್ಲಿ ಅದರಲ್ಲೂ ವಿಶೇಷವಾಗಿ ಮೈಸೂರು ದಕ್ಷಿಣದ ಕೊಳಚೆ ನೀರು ಸಂಸ್ಕರಣಾ ಘಟಕದ ಜಮೀನಿನ ಸುತ್ತಮುತ್ತ ಮೊಸಳೆಗಳು ಕಾಣಿಸಿಕೊಂಡಿರುವುದು ಇಲ್ಲಿನ ನಿವಾಸಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ. 10 ದಿನಗಳ ಅವಧಿಯಲ್ಲಿ, ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ನೀರು ಸಂಸ್ಕರಣಾ ಘಟಕವನ್ನು ಹೊಂದಿರುವ ಒಳಚರಂಡಿ ಘಟಕದ ಆವರಣದಲ್ಲಿ ಕನಿಷ್ಠ ಎರಡು ಮೊಸಳೆಗಳು ಕಾಣಿಸಿಕೊಂಡಿವೆ. ಈ ಪೈಕಿ ಘಟಕದಲ್ಲಿ ಸಿಲುಕಿ ಗಾಯಗೊಂಡಿದ್ದ ಮೊಸಳೆಯನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: ಮೈಸೂರು ಬಳಿ ಮತ್ತೆ ಕಾಣಿಸಿಕೊಂಡ ಚಿರತೆ; ತಾಯೂರು ಗ್ರಾಮದಲ್ಲಿ ದೃಶ್ಯ ಮೊಬೈಲ್ನಲ್ಲಿ ಸೆರೆ
ಮೈಸೂರು ನಗರ ಪಾಲಿಕೆ (ಎಂಸಿಸಿ) ಕಮಿಷನರ್ ಲಕ್ಷ್ಮೀಕಾಂತ್ ರೆಡ್ಡಿ ಈ ಕುರಿತು ಮಾತನಾಡಿದ್ದು, ಕೊಳಚೆ ಜಮೀನಿನಲ್ಲಿ ಕನಿಷ್ಠ 10 ಮೊಸಳೆಗಳು ಇರುವ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದು ಬಹಿರಂಗಪಡಿಸಿದ್ದಾರೆ. ಅವು ಕೊಳಚೆ ನೀರಿನಲ್ಲಿ ಜೀವನಕ್ಕೆ ಹೇಗೆ ಹೊಂದಿಕೊಂಡಿವೆ ಎಂದು ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಮೊಸಳೆಗಳನ್ನು ಸೆರೆಹಿಡಿಯಲು ಪಾಲಿಕೆ ಅರಣ್ಯ ಇಲಾಖೆಯ ನೆರವು ಪಡೆದಿದ್ದರೂ, ಎಸ್‌ಟಿಪಿ ಮತ್ತು 6.5 ಲಕ್ಷ ಟನ್‌ಗೂ ಹೆಚ್ಚು ತ್ಯಾಜ್ಯದ ರಾಶಿಯಲ್ಲಿ ಅವುಗಳನ್ನು ಹುಡುಕಲು ಸಾಧ್ಯವಾಗದ ಕಾರಣ ಸಿಬ್ಬಂದಿ ಇತರೆ ಯೋಜನೆಗಳತ್ತ ಯೋಚಿಸುತ್ತಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಚಿರತೆ ದಾಳಿಗೆ ಯುವತಿ ಸಾವು: ಶೂಟೌಟ್ ಗೆ ಸರ್ಕಾರ ಆದೇಶ; 7.5 ಲಕ್ಷ ರೂ. ಪರಿಹಾರ ಘೋಷಣೆ, ಉದ್ಯೋಗ ಭರವಸೆ
ನಿವೃತ್ತ ಅರಣ್ಯ ಅಧಿಕಾರಿಯೊಬ್ಬರು ಮಾತನಾಡಿ, 2015ರಲ್ಲಿ ಮೊಸಳೆಯೊಂದರ ಶವ ಪತ್ತೆಯಾಗಿದ್ದು, ಅದು ಸಮೀಪದ ಗೋಪುರ ಪಾರ್ಕ್‌ನಿಂದ ಅಥವಾ ಸಮೀಪದ ಕೆರೆಗಳಿಂದ ಬಂದಿರಬಹುದು ಎಂದು ನಂಬಲಾಗಿತ್ತು ಎಂದು ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಮೀನು ಸಾಕಣೆ ನಡೆಯುತ್ತಿದ್ದ ಕಾರಣ, ಅಂದಿನಿಂದ ಇಲ್ಲಿ ಮೊಸಳೆಗಳು ವಾಸವಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಇದನ್ನೂ ಓದಿ: ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಡಿಕ್ಕಿಯಾಗಿ ಚಿರತೆ ಸಾವು
ಏತನ್ಮಧ್ಯೆ, ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆಗೆ ರಾಜ್ಯ ಸಚಿವ ಸಂಪುಟದಿಂದ ಒಪ್ಪಿಗೆ ಸಿಕ್ಕಿರುವುದರಿಂದ ಕೊಳಚೆ ಜಮೀನಿನಲ್ಲಿ ದಶಕಗಳಿಂದ ರಾಶಿ ಬಿದ್ದಿರುವ 6.5 ಲಕ್ಷ ಟನ್ ತ್ಯಾಜ್ಯವನ್ನು ತೆರವುಗೊಳಿಸಲು ಪಾಲಿಕೆ ಸಜ್ಜಾಗಿದೆ. ಒಂದು ತಿಂಗಳ ಅವಧಿಯಲ್ಲಿ ವರ್ಕ್ ಆರ್ಡರ್ ನೀಡುವ ಸಾಧ್ಯತೆ ಇದೆ. ವರ್ಕ್ ಆರ್ಡರ್ ಬಿಡುಗಡೆಯಾದ ನಂತರ ಪರಿಷ್ಕೃತ ಯೋಜನಾ ವರದಿಯಂತೆ 57 ಕೋಟಿ ಅಂದಾಜು ವೆಚ್ಚದಲ್ಲಿ 18 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.