ಗಡಿ ವಿವಾದ ಬಿಸಿಯಾಗಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರು ರಾಜ್ಯಕ್ಕೆ ಬರುವುದು ಸೂಕ್ತವಲ್ಲ: ಸಿಎಂ ಬೊಮ್ಮಾಯಿ
ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಗಡಿ ವಿವಾದ ತಾರಕಕ್ಕೇರಿದ್ದು, ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಸಚಿವರು ರಾಜ್ಯಕ್ಕೆ ಬರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದ್ದಾರೆ.
Published: 05th December 2022 11:35 AM | Last Updated: 05th December 2022 03:00 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಗಡಿ ವಿವಾದ ತಾರಕಕ್ಕೇರಿದ್ದು, ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಸಚಿವರು ರಾಜ್ಯಕ್ಕೆ ಬರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಇದೀಗ ಎರಡೂ ರಾಜ್ಯಗಳಲ್ಲೂ ಗಡಿ ವಿವಾದ ತಾರಕ್ಕೇರಿದ್ದು, ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರು ರಾಜ್ಯಕ್ಕೆ ಬರುವುದು ಬೇಡ ಎಂದು ಪುನರುಚ್ಚರಿಸಿದ್ದಾರೆ.
ಗಡಿ ವಿವಾದ ಹಿನ್ನೆಲೆಯಲ್ಲಿ ನಾಳೆ ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ಬೆಳಗಾವಿಗೆ ಭೇಟಿ ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಗಡಿಯಾಚೆಗಿನ ನಕಲಿ ಸುದ್ದಿಗಳ ವಿರುದ್ಧ ಒತ್ತಡದ ಗುಂಪು ರಚಿಸಿ; ಸಂತೋಷ್ ಲಾಡ್
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬರುವುದು ಬೇಡ. ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಕಾರ್ಯದರ್ಶಿಗೆ ಲಿಖಿತವಾಗಿ ತಿಳಿಸಿದ್ದಾರೆ. ಈಗಿರುವ ವಾತಾವರಣದಲ್ಲಿ ಸಚಿವರು ಬರುವುದು ಬೇಡ, ಇಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಆಗುತ್ತದೆ. ಹೀಗಾಗಿ ಬರುವುದು ಉಚಿತವಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆಂದು ತಿಳಿಸಿದ್ದಾರೆ.
ಸಚಿವರು ಈ ಸಂದರ್ಭದಲ್ಲಿ ಬಂದೇ ಬರುತ್ತೇವೆ ಎಂದು ಹೇಳುವುದು ಸರಿಯಾದ ಕ್ರಮ ಅಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕ ಜನರ ನಡುವೆ ಸಾಮರಸ್ಯ ಇದೆ. ಈಗ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಹೊತ್ತಿನಲ್ಲಿ ಬರುವುದು ಬೇಡ ಎಂದಿದ್ದಾರೆ.
ಇದನ್ನೂ ಓದಿ: ಡಿ.6ರಂದು ಬೆಳಗಾವಿಗೆ ಹೋಗಿಯೇ ಹೋಗುತ್ತೇನೆ, ನನಗೆ ಸಿಎಂ ಬೊಮ್ಮಾಯಿ ಪತ್ರ ಬಂದಿಲ್ಲ: ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್
ಕರ್ನಾಟಕದ ಪ್ರಕಾರ ಗಡಿ ವಿವಾದ ಮುಗಿದು ಹೋಗಿರೋ ಅಧ್ಯಾಯ. ಆದರೆ, ಮಹಾರಾಷ್ಟ್ರ ಪದೇಪದೇ ಖ್ಯಾತೆ ತೆಗೆಯುತ್ತಿದೆ. ಈಗ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಇಂತಹ ಸಂದರ್ಭದಲ್ಲಿ ಬೆಳಗಾವಿಗೆ ಬರುವ ಸಾಹಸ ಮಾಡಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆʼʼ ಎಂದರು.
ಸಚಿವರ ಭೇಟಿ ವಿರುದ್ಧ ಪ್ರತಿಬಂಧಕ ಕಾಯ್ದೆ ಜಾರಿ ಮಾಡುವ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿ, ʻಹಿಂದೆ ಈ ರೀತಿ ಆದಾಗಲೆಲ್ಲಾ ಸರ್ಕಾರ ಯಾವ ಕ್ರಮ ಕೈಗೊಂಡಿದೆಯೋ ಅಂಥಹದ್ದೇ ಕ್ರಮ ಕೈಗೊಳ್ಳುತ್ತೇವೆಂದಿದ್ದಾರೆ.