‘ಕಾಂತಾರ’ ವಿವಾದಾತ್ಮಕ ಹೇಳಿಕೆ: ನಟ ಚೇತನ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಕಾಂತಾರ ಸಿನಿಮಾ ಸಂಬಂಧ ನಟ ಚೇತನ್ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್.ಐ.ಆರ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
Published: 09th December 2022 09:34 AM | Last Updated: 09th December 2022 01:40 PM | A+A A-

ಚೇತನ್
ಬೆಂಗಳೂರು: ಕಾಂತಾರ ಸಿನಿಮಾ ಸಂಬಂಧ ನಟ ಚೇತನ್ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್.ಐ.ಆರ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ನಟ ಚೇತನ್ ತಮ್ಮ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಅವರು ನೀಡಿದ ಹೇಳಿಕೆಗಳು ಐಪಿಸಿಯ ನಿಬಂಧನೆಯಡಿಯಲ್ಲಿ ಪರಿಗಣಿಸಲಾದ ಅಪರಾಧವಾಗಿದೆಯೇ ಅಥವಾ ಇಲ್ಲವೇ ಎಂಬುದು ತನಿಖೆಯ ವಿಷಯವಾಗಿದೆ, ಎಂದು ಚೇತನ್ ಅವರ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಎಂಐ ಅರುಣ್ ಹೇಳಿದರು.
ಶಿವಕುಮಾರ್ ದಾಖಲಿಸಿರುವ ಕ್ರಿಮಿನಲ್ ಪ್ರಕರಣದ ಅರ್ಜಿ ಪ್ರಶ್ನಿಸಿದ ಚೇತನ್, ಸಮಾಜದಲ್ಲಿ ದ್ವೇಷವನ್ನು ಹುಟ್ಟುಹಾಕುವ ಅಥವಾ ಉತ್ತೇಜಿಸುವ ಯಾವುದೇ ಹೇಳಿಕೆಯನ್ನು ಅವರು ಹೇಳಿಲ್ಲ ಎಂದು ವಾದಿಸಿದರು.
ಬುಡಕಟ್ಟು ದೇವತೆಯ ಆರಾಧನೆಯು ಹಿಂದೂ ಧರ್ಮದ ಭಾಗವಲ್ಲ ಎಂದು ಅವರು ಕೇವಲ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಇದು ಐಪಿಸಿಯ ಸೆಕ್ಷನ್ 505 (2) ಅಡಿಯಲ್ಲಿ ಪರಿಗಣಿಸಿದಂತೆ ಅಪರಾಧವಾಗುವುದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ ವಿರುದ್ಧ ದೂರು ದಾಖಲು!, ರಿಷಬ್ ಹೇಳಿದ್ದೇನು?
ಇದಕ್ಕೆ ಪ್ರತಿಯಾಗಿ, ಅರ್ಜಿದಾರರ ವಿರುದ್ಧದ ಆರೋಪಗಳು ತನಿಖೆಯ ವಿಷಯವಾಗಿದ್ದು, ಸಂಬಂಧಪಟ್ಟ ವಸ್ತುಗಳನ್ನು ವಶಪಡಿಸಿಕೊಂಡ ನಂತರ, ಪೊಲೀಸರು ಅಂತಹ ಅಪರಾಧವನ್ನು ಮಾಡಿದ್ದಾರೆಯೇ ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ ಮತ್ತು ಅದರ ಮೇಲೆ ಮಾತ್ರ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಸರ್ಕಾರಿ ಪ್ಲೆಡರ್ ಕೆ ರಾಹುಲ್ ರೈ ಪ್ರತಿಪಾದಿಸಿದರು.
ಸೂಕ್ತ ತನಿಖೆ ನಡೆಸದೆ ಪೊಲೀಸರು ಯಾಂತ್ರಿಕವಾಗಿ ದೋಷಾರೋಪ ಪಟ್ಟಿ ಸಲ್ಲಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಗತ್ಯ ಜಾಮೀನು ಪಡೆಯಲು ಸೂಕ್ತವಾದ ನ್ಯಾಯಾಲಯಕ್ಕೆ ತೆರಳಲು ಅರ್ಜಿದಾರರಿಗೆ ಯಾವಾಗಲೂ ಸ್ವಾತಂತ್ರ್ಯವಿದೆ ಎಂದು ಕೋರ್ಟ್ ತಿಳಿಸಿದೆ.
ಈ ವಿಷಯವು ಇನ್ನೂ ತನಿಖೆಯಲ್ಲಿರುವುದರಿಂದ, ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳು ಅಪರಾಧವಾಗಿದೆಯೇ ಎಂಬುದನ್ನು ಈ ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ನಂತರ ಪೊಲೀಸರು ಅರ್ಜಿದಾರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ನಿರ್ಧರಿಸಿದರೆ, ಅರ್ಜಿದಾರರಿಗೆ ಕಾನೂನಿನ ಪ್ರಕಾರ ಈ ನ್ಯಾಯಾಲಯಕ್ಕೆ ತೆರಳಲು ಯಾವಾಗಲೂ ಸ್ವಾತಂತ್ರ್ಯವಿದೆ ಎಂದು ಹೈಕೋರ್ಟ್ ಸೇರಿಸಿದೆ.