ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಸೋಂಕು ಪತ್ತೆ: ಆರೋಗ್ಯ ಸಚಿವ ಡಾ. ಸುಧಾಕರ್

ರಾಜ್ಯದಲ್ಲಿ ಮೊದಲ ಝೀಕಾ ವೈರಲ್ ಸೋಂಕು ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. 
ಝಿಕಾ ವೈರಾಣು ರೋಗ
ಝಿಕಾ ವೈರಾಣು ರೋಗ

ಬೆಂಗಳೂರು: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಸೋಂಕು ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. 

ಬೆಂಗಳೂರಿನ ಆರೋಗ್ಯಸೌಧದಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಪುಣೆ ವೈರಾಲಜಿ ಲ್ಯಾಬ್‌ನಿಂದ ಪಾಸಿಟಿವ್ ರಿಪೋರ್ಟ್‌ ಬಂದಿದೆ. ಝೀಕಾ ವೈರಸ್‌ ಸೋಂಕಿನ ಬಾಲಕಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ಇನ್ನು ಝೀಕಾ ಸೋಂಕು ಪತ್ತೆಯಾದ ಬಾಲಕಿ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ ಎಂದರು.

ಬಾಲಕಿ ಕಳೆದ 15 ದಿನಗಳಿಂದ ಜ್ವರ, ವಾಂತಿ, ಭೇದಿಯಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ನವೆಂಬರ್ 13ರಂದು ಜ್ವರ ಕಾಣಿಸಿಕೊಂಡಿತ್ತು. ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಡೆಂಘೀ ಜ್ವರ ದೃಢಪಟ್ಟ ಹಿನ್ನೆಲೆ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ವೈದ್ಯರು ಬಾಲಕಿಯ ಮೂರು ಮಾದರಿಗಳನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ಅದರಲ್ಲಿ ಎರಡು ನೆಗೆಟಿವ್ ಮತ್ತು ಒಂದು ಪಾಸಿಟಿವ್ ಬಂದಿದೆ.  

ಕೆಲವು ತಿಂಗಳ ಹಿಂದೆ ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಝಿಕಾ ವೈರಸ್ ಪ್ರಕರಣಗಳು ಕಂಡುಬಂದಿವೆ. ಇನ್ನು ಕರ್ನಾಟಕದಲ್ಲಿ ಇಂದು ಮೊದಲ ಪ್ರಕರಣವಾಗಿದೆ. ಸ್ಯಾಂಪಲ್ ಅನ್ನು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪರೀಕ್ಷೆಗೆ ಒಳಪಡಿಸಿದಾಗ ಇದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಅಂತಹ ಮಾದರಿಗಳಲ್ಲಿ 10 ಪ್ರತಿಶತವನ್ನು ಪರೀಕ್ಷೆಗೆ ಪುಣೆಗೆ ಕಳುಹಿಸಲಾಗುತ್ತದೆ. ಡಿಸೆಂಬರ್ 9ರಂದು ಪಾಸಿಟಿವ್ ಬಂದಿದೆ ಎಂದು ಸಚಿವರು ಹೇಳಿದರು.

ಸೋಂಕಿನ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ಯಾವುದೇ ಆಸ್ಪತ್ರೆಗಳಲ್ಲಿ ಶಂಕಿತ ಸೋಂಕು ಪ್ರಕರಣಗಳು ಕಂಡುಬಂದಲ್ಲಿ ಝಿಕಾ ವೈರಸ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಲು ರಾಯಚೂರು ಮತ್ತು ನೆರೆಯ ಜಿಲ್ಲೆಗಳ ಕಣ್ಗಾವಲು(ಆರೋಗ್ಯ ಇಲಾಖೆ) ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. 

ರಾಜ್ಯದಲ್ಲಿ ಇದುವರೆಗೆ ಝಿಕಾ ವೈರಸ್‌ನ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ ಸಚಿವರು, ಸರ್ಕಾರವು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಂಜೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ. 

ಈಡಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಝಿಕಾ ವೈರಸ್ ಸೋಂಕು ಹರಡುತ್ತದೆ. ಇದು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೋಂಕುಗಳನ್ನು ಹರಡುತ್ತದೆ. ಈ ವೈರಸ್ ಅನ್ನು ಮೊದಲು 1947ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com