ನಾನು ಸಿಎಂ ಆದ್ಮೇಲೆ ಮೂರನೇ ಬಾರಿ ಚಾಮರಾಜನಗರಕ್ಕೆ ಹೋಗುತ್ತಿರುವುದು, ನನಗೆ ಮೂಢನಂಬಿಕೆಯಿಲ್ಲ: ಸಿಎಂ ಬೊಮ್ಮಾಯಿ

ಚಾಮರಾಜನಗರ ಜಿಲ್ಲೆಗೆ ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದುಹೋಗುತ್ತದೆ ಎಂಬುದು ಕರ್ನಾಟಕ ರಾಜಕೀಯ ವಲಯದಲ್ಲಿರುವ ನಂಬಿಕೆ. ಈ ಭಯದಿಂದ ಅನೇಕ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿಯೇ ನೀಡಿಲ್ಲ. ಇನ್ನು ಕೆಲವರು ಹಿಂದೇಟು ಹಾಕುತ್ತಾ ಹೋಗಿ ಬಂದಿದ್ದೂ ಇದೆ. ಇದೊಂಥರಾ ಮೂಢನಂಬಿಕೆ ಎನ್ನಬಹುದು. 
ಸಿಎಂ ಬೊಮ್ಮಾಯಿ(ಸಂಗ್ರಹ ಚಿತ್ರ)
ಸಿಎಂ ಬೊಮ್ಮಾಯಿ(ಸಂಗ್ರಹ ಚಿತ್ರ)

ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದುಹೋಗುತ್ತದೆ ಎಂಬುದು ಕರ್ನಾಟಕ ರಾಜಕೀಯ ವಲಯದಲ್ಲಿರುವ ನಂಬಿಕೆ. ಈ ಭಯದಿಂದ ಅನೇಕ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿಯೇ ನೀಡಿಲ್ಲ. ಇನ್ನು ಕೆಲವರು ಹಿಂದೇಟು ಹಾಕುತ್ತಾ ಹೋಗಿ ಬಂದಿದ್ದೂ ಇದೆ. ಇದೊಂಥರಾ ಮೂಢನಂಬಿಕೆ ಎನ್ನಬಹುದು. 

ಈ ಮೂಢನಂಬಿಕೆಗೆ ಸೆಡ್ಡು ಹೊಡೆದು ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಚಾಮರಾಜನಗರ ಜಿಲ್ಲೆಗೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯವನ್ನು ಬದಿಗೊತ್ತಿ  ರಾಜ್ಯದ ಮುಖ್ಯಮಂತ್ರಿಯೊಬ್ಬರು ಮೂರನೇ ಬಾರಿಗೆ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. 

ಜಾತ್ಯತೀತ, ಸಮಾಜವಾದಿ ರಾಜಕಾರಣಿ ಸಿದ್ದರಾಮಯ್ಯ ಅವರಿಂದ ಚಾಮರಾಜನಗರಕ್ಕೆ ಅಂಟಿದ್ದ ಮೌಢ್ಯ ಅಳಿದರೂ ಸಹ ತದನಂತರ ಬಂದ ಬಿ.ಎಸ್.ಯಡಿಯೂರಪ್ಪ ಗಡಿಜಿಲ್ಲೆಗೆ ಕಾಲಿಡಲೇ ಇಲ್ಲ- ಆದರೆ ಬೊಮ್ಮಾಯಿ ಈಗ ಎರಡನೇ ಬಾರಿಗೆ ಗಡಿಜಿಲ್ಲೆಗೆ ಆಗಮಿಸಿದ್ದು ನೂರಾರು ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. 

1988ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಅವರು ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ಕೊಟ್ಟು ತಾಲೂಕು ಕಚೇರಿ ಸಂಕೀರ್ಣ ಮತ್ತು‌ ತಾಲೂಕು ಆಸ್ಪತ್ರೆ ಉದ್ಘಾಟಿಸಿದ್ದರು.  ತಂದೆಯ ಹಾದಿಯನ್ನೇ ಅನುಕರಿಸಿರುವ  ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ. 

ಚಾಮರಾಜನಗರ ಜಿಲ್ಲೆಗೆ ಅಧಿಕಾರ ಹೋಗುತ್ತದೆ ಎನ್ನುವ ಅಪವಾದ ಆರಂಭವಾಗಿದ್ದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ವಿಶಿಷ್ಟ ಸಾಲಿನಲ್ಲಿ, ಅಗ್ರ ಸ್ಥಾನದಲ್ಲಿ ನಿಲ್ಲುವ 'ಹಿಂದುಳಿದ ವರ್ಗಗಳ ಹರಿಕಾರ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಿ. ದೇವರಾಜ ಅರಸು ಅವರ ಕಾಲದಿಂದ. ಡಿ. ದೇವರಾಜ ಅರಸು ಅವರನ್ನು ಹೊರತುಪಡಿಸಿ ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಅಧಿಕಾರ ಕಳೆದುಕೊಂಡ ಉದಾಹರಣೆಗಳಿವೆ. 

ಇಂದು ಚಾಮರಾಜನಗರಕ್ಕೆ ಹೋಗುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾನು ಮುಖ್ಯಮಂತ್ರಿಯಾದ ನಂತರ ಇದು ಮೂರನೇ ಬಾರಿ ಹೋಗುತ್ತಿರುವುದು, ಕರ್ನಾಟಕದ 31 ಜಿಲ್ಲೆಗಳಲ್ಲಿ ಅದೂ ಒಂದು, ಅದನ್ನು ಅಸಡ್ಡೆ ಮಾಡುವಂತಿಲ್ಲ, ವಿಶೇಷವೇನೂ ಇಲ್ಲ. ಗಡಿ ಜಿಲ್ಲೆ ಚಾಮರಾಜನಗರ ಐತಿಹಾಸಿಕವಾಗಿ ವಿಶೇಷವಾಗಿರುವ ಜಿಲ್ಲೆ, ಹೀಗಾಗಿ ಅಭಿವೃದ್ಧಿಗೆ ಮಹತ್ವ ಕೊಡುತ್ತೇವೆ. ಚಾಮರಾಜನಗರಕ್ಕೆ ಹೋಗುತ್ತಿದ್ದೇನೆ, ಬೇರೇನೂ ನನ್ನ ತಲೆಯಲ್ಲಿ ಇಲ್ಲ ಎಂದರು.

ಕೇಂದ್ರ ಗೃಹ ಸಚಿವರು ಬೆಳಗಾವಿ ಗಡಿ ವಿಚಾರವಾಗಿ ಚರ್ಚೆ ನಡೆಸಲು ಕರೆದಿದ್ದಾರೆ, ನಾಳೆ ದೆಹಲಿಗೆ ಹೋಗಿ ಅಲ್ಲಿ ನಮ್ಮ ನಿಲುವನ್ನು ಹೇಳುತ್ತೇನೆ ಎಂದರು. ಈಗಾಗಲೇ ರಾಜ್ಯ ಪುನರ್ ವಿಂಗಡಣೆ ಕಾಯ್ದೆ, ನಂತರ ನಡೆದ ಪ್ರಕ್ರಿಯೆ, ಈಗಿನವರೆಗೆ ಸುಪ್ರೀಂ ಕೋರ್ಟ್ ಕೇಸುವರೆಗೆ ಎಲ್ಲಾ ಮಾಹಿತಿಗಳನ್ನು ಗೃಹ ಸಚಿವರಿಗೆ ಮತ್ತು ಗೃಹ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡುತ್ತೇನೆ ಎಂದರು.

ನಾಳೆ ಗೃಹ ಸಚಿವರನ್ನು ಭೇಟಿಯಾಗುತ್ತಿರುವ ಅಧಿಕೃತ ವಿಷಯ ಬೆಳಗಾವಿ ಗಡಿ ವಿಚಾರ. ಅಲ್ಲಿ ಅಮಿತ್ ಶಾ ಅವರು ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದರೆ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ಹೋಗುತ್ತೇನೆ ಎಂದರು. 

ಮಾಂಡೌಸ್ ಚಂಡಮಾರುತದಿಂದ ಕೆಲವು ಕಡೆ ತೊಂದರೆಗಳಾಗಿವೆ. ಅದರ ಸಮೀಕ್ಷೆ ವಿಶೇಷವಾಗಿ ರಾಗಿಯಂತಹ ಬೆಳೆಗಳ ಮೇಲೆ ಆಗಿರುವ ಪ್ರಭಾವಗಳನ್ನು ಸಮೀಕ್ಷೆ ಮಾಡುತ್ತೇವೆ. ಕೃಷಿ ಇಲಾಖೆಯಿಂದ ಮಾಹಿತಿ ತರಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com