ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಿನಲ್ಲಿ ಹೂಳಬೇಕು, ನನ್ನ ಮತ್ತು ಶಿಗ್ಗಾವಿ ಜನರ ಕರುಳಬಳ್ಳಿ ಸಂಬಂಧ ಈ ಉಸಿರು ಇರುವವರೆಗೂ ಇರುತ್ತದೆ: ಸಿಎಂ ಬೊಮ್ಮಾಯಿ ಬಾವುಕ ನುಡಿ
ನನ್ನ ಮತ್ತು ಶಿಗ್ಗಾವಿ ಕ್ಷೇತ್ರದ ಜನರ ಕರುಳಬಳ್ಳಿ ಸಂಬಂಧ ಮುಗಿಯಲ್ಲ.. ನಾನು ಸತ್ತ ಮೇಲೂ ನನ್ನನ್ನು ಇಲ್ಲೇ ಮಣ್ಣು ಮಾಡಬೇಕು, ಇದು ನಾನು ಮಾಡಿಕೊಂಡಿರುವ ನಿರ್ಧಾರ ಎಂದು ತವರು ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾವುಕವಾಗಿ ನುಡಿದ ಪ್ರಸಂಗ ನಡೆದಿದೆ.
Published: 18th December 2022 11:41 AM | Last Updated: 18th December 2022 11:41 AM | A+A A-

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಬಾಡ ಗ್ರಾಮದಲ್ಲಿ ಮಕ್ಕಳೊಂದಿಗೆ ಊಟ ಮಾಡಿದರು. ಕಂದಾಯ ಸಚಿವ ಆರ್. ಅಶೋಕ್ ಹಾಜರಿದ್ದರು.
ಹಾವೇರಿ: ನನ್ನ ಮತ್ತು ಶಿಗ್ಗಾವಿ ಕ್ಷೇತ್ರದ ಜನರ ಕರುಳಬಳ್ಳಿ ಸಂಬಂಧ ಮುಗಿಯಲ್ಲ.. ನಾನು ಸತ್ತ ಮೇಲೂ ನನ್ನನ್ನು ಇಲ್ಲೇ ಮಣ್ಣು ಮಾಡಬೇಕು, ಇದು ನಾನು ಮಾಡಿಕೊಂಡಿರುವ ನಿರ್ಧಾರ ಎಂದು ತವರು ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾವುಕವಾಗಿ ನುಡಿದ ಪ್ರಸಂಗ ನಡೆದಿದೆ.
ಯಾವ ಜನ್ಮದ ಋಣವೋ ನನಗೆ ಗೊತ್ತಿಲ್ಲ, ನಾನು ಬಂದಾಗ ಪ್ರೀತಿ ವಿಶ್ವಾಸ ತೋರಿಸಿದ್ದೀರಿ. ನಾನು ಸತ್ತ ಮೇಲೆ ನನ್ನ ಅಂತ್ಯಕ್ರಿಯೆ ಇದೇ ಕ್ಷೇತ್ರದಲ್ಲಿ ಮಾಡಬೇಕು, ಇದೇ ಮಣ್ಣಿನಲ್ಲಿ ಹೂಳಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಭಾವುಕ ನುಡಿಗಳನ್ನಾಡಿದ್ದಾರೆ.
ನಿನ್ನೆ ಹಾವೇರಿ ಜಿಲ್ಲೆ ಶಿಗ್ಗಾಂವಿ (Shiggaavi) ಬಾಡ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ (Grama Vastavya) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಆಯುರ್ವೇದ ಕಾಲೇಜು, ಟೈಕ್ಸಟೈಲ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಮನೆ-ಮನೆಗೆ ಹೋಗಿ ಕಂದಾಯ ದಾಖಲೆಗಳನ್ನ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರ್.ಅಶೋಕ್ ಗ್ರಾಮದ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ಒಂದು ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇಷ್ಟು ದೊಡ್ಡ ಸಂಖ್ಯೆಯಲ್ಲಿ ತಾವೆಲ್ಲಾ ಸೇರಿದ್ದೀರಿ. ಎಲ್ಲಾ ಕಾರ್ಯಕ್ರಮಗಳ ಫಲಾನುಭವಿಗಳು ಇಂದು ಇಲ್ಲಿ ಬಂದಿದ್ದೀರಿ. ಎಲ್ಲಾ ಫಲಾನುಭವಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು. ನಾನು ಈ ಜಿಲ್ಲೆಗೆ ಹೋಗುತ್ತಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳುತ್ತಿದ್ದರು. ಅದಕ್ಕೆ ನಮ್ಮ ಕ್ಷೇತ್ರಕ್ಕೆ ಬರುವುದಿಲ್ಲವೇನಪ್ಪಾ ಎಂದು ಕೇಳಿದೆ. ಉತ್ತರ ಕರ್ನಾಟಕದ ನಮ್ಮ ಜನ ಹೃದಯ ಶ್ರೀಮಂತರು, ಅವರು ಬಹಳ ಪ್ರೀತಿ ತೋರಿಸುತ್ತಾರೆ. ಬನ್ನಿ ಎಂದು ಕರೆದೆ. ಇಂದು ಕಂದಾಯ ಸಚಿವರು ನಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಹೊಗಳಿದರು.
ಇಂದು 30 ಸಾವಿರ ಜನರಿಗೆ ಸರ್ಕಾರದ ಪರಿಹಾರದ ಹಣ, ಪ್ರಮಾಣ ಪತ್ರ ಕೊಡುತ್ತಿದ್ದೇವೆ. 6 ಸಾವಿರ ಮನೆಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದೇವೆ. ಒಂದೇ ದಿನ 30 ಸಾವಿರ ಜನರಿಗೆ ಕೊಡುತ್ತಿದ್ದೇವೆ. ಕನಕದಾಸರ ಮಹಿಮೆ ಪ್ರಾರಂಭವಾಗಿದ್ದೇ ಈ ಬಾಡ ಗ್ರಾಮದಲ್ಲಿ. ಇದೊಂದು ಪರಿವರ್ತನೆಯ ಭೂಮಿ, ಪುಣ್ಯ ಭೂಮಿ ಇದು. ಇಲ್ಲಿಂದ ಶಿಗ್ಗಾಂವಿಯ ಭವಿಷ್ಯ ಮತ್ತಷ್ಟು ಉಜ್ವಲವಾಗಲಿದೆ ಎಂದು ಶ್ಲಾಘಿಸಿದರು.
ನಾನು ದಿನನಿತ್ಯ ಎರಡ್ಮೂರು ಕ್ಷೇತ್ರಗಳಿಗೆ ಹೋಗುತ್ತಿರುತ್ತೇನೆ. ಅಲ್ಲಿ ಜನ ಬಹಳ ಪ್ರೀತಿಯಿಂದ ಸ್ವಾಗತ ಕೋರುತ್ತಾರೆ. ಆಗ ನನಗೆ ನೀವೇ ನೆನಪಾಗುತ್ತೀರಿ. ಈ ಸ್ಥಾನ, ಗೌರವ ನನಗೆ ಸೇರಬೇಕಾಗಿದ್ದಲ್ಲ, ಈ ಕ್ಷೇತ್ರದ ಜನರಾದ ನಿಮಗೆ ಸೇರಬೇಕು. ಬಂಧುಗಳೇ ನಾನು ನಿಮ್ಮ ಋಣದಲ್ಲಿದ್ದೇನೆ. ನನ್ನ ಜೀವನದ ಕೊನೆಯ ಉಸಿರಿರುವವರೆಗೆ ನಿಮ್ಮ ಸೇವೆ ಮಾಡುತ್ತೇನೆ. ಏನಪ್ಪಾ, ನಮ್ಮ ಸಾಹೇಬರು ದೂರ ಆಗಿಬಿಟ್ಟರು ಎಂದು ನಿಮಗೆ ಅನ್ನಿಸಿರಬಹುದು. ಆದರೆ ನನ್ನ ಹೃದಯ ಇಲ್ಲೇ ಇರುತ್ತದೆ ಎಂದು ಬೊಮ್ಮಾಯಿ ಅವರು ಭಾವುಕರಾದರು.
ಡಿಸೆಂಬರ್ 31ರೊಳಗೆ ಮನೆ ಕಳೆದುಕೊಂಡ ಬಡವರಿಗೆ ನಾನೇ ಬಂದು ಧನಸಹಾಯ ಕೊಡುತ್ತೇನೆ. ಶಾಲೆಯ ಮಕ್ಕಳಿಗಾಗಿಯೇ ವಿಶೇಷ ಬಸ್ ಕೊಡುತ್ತೇವೆ. ನನ್ನ ಕ್ಷೇತ್ರದ ಪ್ರತಿ ಹಳ್ಳಿಯ ಹೊಲಗಳಿಗೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಮಿಸಲು ಆಜ್ಞೆ ಮಾಡುತ್ತೇನೆ. ನಮ್ಮ ಸರ್ಕಾರ ಒಂದೇ ವರ್ಷದಲ್ಲಿ 8 ಸಾವಿರ ಶಾಲೆಗಳನ್ನು ನಿರ್ಮಾಣ ಮಾಡುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ನಿರ್ಮಾಣ ಮಾಡುತ್ತಿದೆ. ಶಿಗ್ಗಾಂವಿಯಲ್ಲಿ 250 ಬೆಡ್‌ಗಳ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ. ಹಿಂದಿನ ಯಾವ ಸರ್ಕಾರಗಳೂ ಈ ಕೆಲಸ ಮಾಡಿಲ್ಲ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಕೊಂಡಾಡಿದರು.