ಮುಂದಿನ ವಿಧಾನಸಭಾ ಚುನಾವಣೆಗೆ ಸಜ್ಜಾಗಲು ಕೆಪಿಸಿಸಿ ಚುನಾವಣಾ ಸಮಿತಿ ರಚನೆ; 11 ಹೊಸ ನಾಯಕರ ಸೇರ್ಪಡೆ

ಕರ್ನಾಟಕ ಪ್ರದೇಶ ಚುನಾವಣಾ ಸಮಿತಿಗೆ ಪಕ್ಷದ 11 ಹೊಸ ನಾಯಕರನ್ನು ಕಾಂಗ್ರೆಸ್ ಸೋಮವಾರ ನೇಮಕ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕರ್ನಾಟಕ ಪ್ರದೇಶ ಚುನಾವಣಾ ಸಮಿತಿಗೆ ಪಕ್ಷದ 11 ಹೊಸ ನಾಯಕರನ್ನು ಕಾಂಗ್ರೆಸ್ ಸೋಮವಾರ ನೇಮಕ ಮಾಡಿದೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಈ ನೇಮಕಾತಿಗಳು ನಡೆಯುತ್ತಿದ್ದು, ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಸರ್ವ ಪ್ರಯತ್ನಕ್ಕೆ ಮುಂದಾಗಿದೆ.

2023ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಕೆಪಿಸಿಸಿ ಚುನಾವಣಾ ಸಮಿತಿಗೆ ಹೆಚ್ಚುವರಿ ಹೆಸರುಗಳನ್ನು ಸೇರಿಸುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷರು ಅನುಮೋದಿಸಿದ್ದಾರೆ. ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಎಂದು ಪಕ್ಷದ ಅಧಿಕೃತ ಸಂವಹನ ತಿಳಿಸಿದೆ.

ಕೆಪಿಸಿಸಿ ಚುನಾವಣಾ ಸಮಿತಿಗೆ ಬಿ.ಎಲ್ ಶಂಕರ್, ಪರಮೇಶ್ವರ್ ನಾಯ್ಕ್, ಉಮಾಶ್ರೀ, ರಮೇಶ್ ಕುಮಾರ್, ರಮಾನಾಥ್ ರೈ, ಹೆಚ್.ಎಂ. ರೇವಣ್ಣ ಮತ್ತು ಎ.ಎಂ. ಹಿಂಡಸಗೇರಿ ಹೆಸರು ಸೇರ್ಪಡೆಗೊಂಡಿದೆ.

ಜತೆಗೆ ರಾಜ್ಯ ಕಾಂಗ್ರೆಸ್ ಮುಖಂಡರಾದ ಜಮೀರ್ ಅಹ್ಮದ್, ಶಿವಾನಂದ್ ಪಾಟೀಲ್, ಶರಣಬಸಪ್ಪಗೌಡ ದರ್ಶನಾಪುರ, ಶರಣಪ್ರಕಾಶ ಪಾಟೀಲ್ ಅವರನ್ನೂ ಸಮಿತಿಗೆ ಸೇರಿಸಲಾಗಿದೆ.

ಕಾಂಗ್ರೆಸ್ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆಯಲ್ಲಿ ಈ ವಿಚಾರದ ಕುರಿತು ಚರ್ಚೆ ನಡೆದಿತ್ತು. ಒಂದೆರಡು ದಿನಗಳಲ್ಲಿ ಸಮಿತಿ ರಚಿಸಲಾಗುತ್ತದೆ ಎಂದು ಖರ್ಗೆ ತಿಳಿಸಿದ್ದರು.

ಈ ಸಮಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರು, ಹಿರಿಯ ನಾಯಕರು ಸೇರಿ 36 ಮಂದಿ ಇದ್ದಾರೆ.

ಯುವ ಕಾಂಗ್ರೆಸ್, ಎನ್ಎಸ್ ಯುಐ, ಮಹಿಳಾ ಕಾಂಗ್ರೆಸ್, ಸೇವಾದಳ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸಮಿತಿಯಲ್ಲಿ ಇದ್ದಾರೆ. ಕಾಂಗ್ರೆಸ್ ಟಿಕೆಟ್ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಈ ಸಮಿತಿ ಪರಿಶೀಲನೆ ಮಾಡಿ ಹೈಕಮಾಂಡ್‌ಗೆ ಕಳುಹಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com