ಗದಗ: ವಿದ್ಯಾರ್ಥಿಗೆ ಥಳಿಸಿ, ಮೊದಲ ಮಹಡಿಯಿಂದ ಎಸೆದ ಶಿಕ್ಷಕ; ಬಾಲಕ ಸಾವು, ಮೃತ ವಿದ್ಯಾರ್ಥಿ ತಾಯಿ ಮೇಲೂ ಹಲ್ಲೆ, ಪರಿಸ್ಥಿತಿ ಗಂಭೀರ

ಅತಿಥಿ ಶಿಕ್ಷಕನೊಬ್ಬ 10 ವರ್ಷದ ವಿದ್ಯಾರ್ಥಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದರ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗದಗ: ಅತಿಥಿ ಶಿಕ್ಷಕನೊಬ್ಬ 10 ವರ್ಷದ ವಿದ್ಯಾರ್ಥಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದರ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ.

ಗದಗ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕ 10 ವರ್ಷದ ವಿದ್ಯಾರ್ಥಿಗೆ ಥಳಿಸಿ ಶಾಲೆಯ ಮೊದಲ ಮಹಡಿಯಿಂದ ಎಸೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ 4ನೇ ತರಗತಿ ವಿದ್ಯಾರ್ಥಿ ಭರತ್ ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮದ್ಯದಲ್ಲೇ ಸಾವನ್ನಪ್ಪಿದ್ದಾನೆ.

ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರಕಾರಿ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಭರತ್ ಬಾರ್ಕರ್ ಎಂದು ಗುರುತಿಸಲಾಗಿದ್ದು, ಆರೋಪಿ ಶಿಕ್ಷಕ ಮುತ್ತಪ್ಪ ಹಡಗಲಿ (38) ಪ್ರಕರಣದ ನಂತರ ತಲೆ ಮರೆಸಿಕೊಂಡಿದ್ದಾನೆ.

ಬಾಲಕನನ್ನು ಕೊಂದಿದ್ದಲ್ಲದೆ, ಭರತ್‌ನ ತಾಯಿ ಗೀತಾ ಬಾರ್ಕರ್ (36) ಸೇರಿದಂತೆ ಶಾಲೆಯ ಇಬ್ಬರು ಶಿಕ್ಷಕರಿಗೂ ಮುತ್ತಪ್ಪ ಥಳಿಸಿದ್ದಾನೆ. ಈ ಇಬ್ಬರಿಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಭರತ್ ತಾಯಿ ಗೀತಾ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ಆಕೆಯ  ಸ್ಥಿತಿ ಚಿಂತಾಜನಕವಾಗಿದ್ದು, ಆಘಾತಕ್ಕೊಳಗಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತಲೆಗೆ ಪೆಟ್ಟಾಗಿರುವ ಮತ್ತೊಬ್ಬ ಶಿಕ್ಷಕ ಎಸ್.ಸಿ.ಪಾಟೀಲ ಚೇತರಿಸಿಕೊಳ್ಳುತ್ತಿದ್ದಾರೆ. ಈ  ಘಟನೆಗೆ ವೈಯಕ್ತಿಕ ವೈಷಮ್ಯವೇ ಕಾರಣ ಎಂದು ಪೊಲೀಸರು ಮತ್ತು ಗ್ರಾಮಸ್ಥರು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಶ್ರೀಶೈಲಕ್ಕೆ ಪ್ರವಾಸಕ್ಕೆ ಹೋಗಿದ್ದರು ಮತ್ತು ಸೋಮವಾರ ಬೆಳಿಗ್ಗೆ ಶಾಲೆಗೆ ಹಿಂತಿರುಗಿದಾಗ ಅವರು ಸಂತೋಷದಿಂದಿದ್ದರು ಎಂದು ಶಾಲೆಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಪ್ರವಾಸದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾಗ ಬಾಗಿಲು ಮುಚ್ಚಿದ ಮುತ್ತಪ್ಪ ಭರತ್ ನನ್ನು ಥಳಿಸಿದ್ದಾನೆ. ಭರತ್‌ನ ಕೂಗು  ಕೇಳಿ ಪಕ್ಕದ ತರಗತಿಯಲ್ಲಿ ಪಾಠ ಮಾಡುತ್ತಿದ್ದ ಗೀತಾ ಧಾವಿಸಿ ಬಂದಿದ್ದಾರೆ. ಮುತ್ತಪ್ಪ  ಗೀತಾ ಮತ್ತು ಇತರ ಶಿಕ್ಷಕರ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿ ಮೊದಲ ಮಹಡಿಯಿಂದ ಬಾಲಕನನ್ನು ಎಸೆದಿದ್ದಾನೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಶಾಲೆಯ ಸಿಬ್ಬಂದಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಭರತ್ ಮತ್ತು ಗೀತಾ ಇಬ್ಬರನ್ನೂ ನರಗುಂದ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಇಬ್ಬರನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಕಿಮ್ಸ್) ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅದರಂತೆ ಭರತ್‌ನನ್ನು ಕಿಮ್ಸ್‌ಗೆ ಕರೆತರಲಾಯಿತು, ಆದರೆ ಅಷ್ಟರಲ್ಲಾಗಲೇ ಭರತ್ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು.

ಭರತ್ ಮತ್ತು ಗೀತಾ ಕಿರುಚಾಡುವುದನ್ನು ಕೇಳಿ ನಾವು ತರಗತಿಯ ಬಳಿ ಹೋದೆವು. ಮುತ್ತಪ್ಪ ಸಿಟ್ಟಿಗೆದ್ದು ಮಗ ಮತ್ತು ತಾಯಿಗೆ ಹೊಡೆಯುತ್ತಿದ್ದ’ ಎಂದು ಶಿಕ್ಷಕರು ಹೇಳಿದರು. ಗದಗ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ಪ್ರಾಥಮಿಕ ತನಿಖೆಯ ಪ್ರಕಾರ ಅತಿಥಿ ಶಿಕ್ಷಕ ಮುತ್ತಪ್ಪ ಎಂಬಾತ ಬಾಲಕನ ಮೇಲೆ ಹಲ್ಲೆ ನಡೆಸಿದ್ದು, ಬಾಲಕ ಮೃತಪಟ್ಟಿದ್ದಾನೆ.

ಈ ಘಟನೆಗೆ ಕಾರಣ ತಿಳಿದುಬಂದಿಲ್ಲ. ಗೀತಾ ಇನ್ನೂ ಕಿಮ್ಸ್  ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರ ಹೇಳಿಕೆಯ ನಂತರ  ಶಿಕ್ಷಕ ಹದ್ಲಿ ಗ್ರಾಮದಿಂದ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದೇವೆ. ಆರೋಪಿಗಳನ್ನು ಶೀಘ್ರ ಬಂಧಿಸಲು ವಿಶೇಷ ತಂಡ ರಚಿಸಿದ್ದೇವೆ ಎಂದು ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com