ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ಮಂದಿರ ಅಭಿವೃದ್ಧಿ: ಯೋಜನೆ ರೂಪಿಸಲು ಸಿಎಂ ಸೂಚನೆ- ಸಚಿವ ಅಶ್ವತ್ಥ್ ನಾರಾಯಣ
ರಾಮನಗರದಲ್ಲಿರುವ ಪ್ರಸಿದ್ಧ ರಾಮ ದೇವರ ಬೆಟ್ಟದಲ್ಲಿ ಅಯೋಧ್ಯೆಯ ರಾಮ ಮಂದಿರದ ಮಾದರಿ ದೇವಾಲಯ ನಿರ್ಮಾಣ, ಅಭಿವೃದ್ಧಿಗೆ ಯೋಜನೆ ರೂಪಿಸಲು ಸಿಎಂ ಸೂಚನೆ ನೀಡಿದ್ದಾರೆ.
Published: 28th December 2022 02:17 PM | Last Updated: 28th December 2022 02:17 PM | A+A A-

ರಾಮನಗರ- ಅದ್ಯೋಧ್ಯೆ
ಬೆಳಗಾವಿ: ರಾಮನಗರದಲ್ಲಿರುವ ಪ್ರಸಿದ್ಧ ರಾಮ ದೇವರ ಬೆಟ್ಟದಲ್ಲಿ ಅಯೋಧ್ಯೆಯ ರಾಮ ಮಂದಿರದ ಮಾದರಿ ದೇವಾಲಯ ನಿರ್ಮಾಣ, ಅಭಿವೃದ್ಧಿಗೆ ಯೋಜನೆ ರೂಪಿಸಲು ಸಿಎಂ ಸೂಚನೆ ನೀಡಿದ್ದಾರೆ.
ಸುವರ್ಣ ಸೌಧದಲ್ಲಿ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ ಈ ಬಗ್ಗೆ ಮಾಹಿತಿ ನೀಡಿದ್ದು ಜಿಲ್ಲೆಯ ಹೆಸರೇ ರಾಮನಗರವಾಗಿರುವುದರಿಂದ ರಾಮ ಮಂದಿರದ ಅಭಿವೃದ್ಧಿಯಾಗುವುದು ಸೂಕ್ತವಾಗಿದೆ. ಅಯೋಧ್ಯೆಯ ಮಾದರಿಯಲ್ಲೇ ದಕ್ಷಿಣ ಭಾರತದಲ್ಲಿ ರಾಮ ಮಂದಿರ ನಿರ್ಮಾಣವಾಗುವ ವಿಶ್ವಾಸವಿದೆ, ಮುಂಬರುವ ಬಜೆಟ್ ನಲ್ಲಿ ಸಿಎಂ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ರಾಮನಗರದಲ್ಲಿರುವ ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯಾಗಿ ಮಾಡುವ ಉದ್ದೇಶ ಹೊಂದಿದ್ದೇವೆ. ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಅಲ್ಲಿರುವ ರಾಮನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ, ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲಿದ್ದೇವೆ. ಅಭಿವೃದ್ಧಿಗಾಗಿ ಮುಂಬರುವ ಬಜೆಟ್ ನಲ್ಲಿ ಸಿಎಂ ಅನುದಾನ ಘೋಷಣೆ ಮಾಡುತ್ತಾರೆ. ಆ ಮೂಲಕ ರಾಮನಗರದ ರಾಮದೇವರ ಬೆಟ್ಟವನ್ನು ಹಿಂದೂ ಧಾರ್ಮಿಕ ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದಾರೆ.