ಬೆಂಗಳೂರು: ರಾಜಕಾಲುವೆ ಮೇಲಿನ ಅರಮನೆ, ಮಾಲ್ ಗಳ ಮೇಲೆ ಬುಲ್ಡೋಜರ್ ಹೋಗಲ್ಲ- ಕುಮಾರಸ್ವಾಮಿ
ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್ ಗಳು, ಅರಮನೆಯಂತಹ ಭಂಗಲೆಗಳ ಮೇಲೆ ಬುಲ್ಡೋಜರ್ ಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್ ಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 03rd July 2022 10:28 PM | Last Updated: 03rd July 2022 10:29 PM | A+A A-

ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್ ಗಳು, ಅರಮನೆಯಂತಹ ಭಂಗಲೆಗಳ ಮೇಲೆ ಬುಲ್ಡೋಜರ್ ಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್ ಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ನಾಗೇನಹಳ್ಳಿಯಲ್ಲಿ ನಡೆದ ಜನತಾಮಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು. ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ನಿವೇಶನ, ಮನೆ ಕೊಡಬೇಕಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ. ಅದೊಂದು ಭ್ರಷ್ಟಕೂಪ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಒಂದರಲ್ಲೇ ಸುಮಾರು 30 ಸಾವಿರಕ್ಕೂ ಹೆಚ್ಚು ಎಕರೆಯನ್ನು ಭೂ ಗಳ್ಳರು ಕಬಳಿಸಿದ್ದಾರೆ. ಅದನ್ನು ಮರು ವಶಪಡಿಸಿಕೊಂಡರೆ ಲಕ್ಷಾಂತರ ಬಡವರಿಗೆ ಮನೆ ಕಟ್ಟಿಕೊಡಬಹುದು. ಅಂತಹ ಕೆಲಸವನ್ನು ಬಿಡಿಎ ಮಾಡುತ್ತಿಲ್ಲ. ನನಗೊಂದು ಅವಕಾಶ ಕೊಟ್ಟು ನೀಡಿ, ಬೆಂಗಳೂರು ನಗರವನ್ನು ಅಭಿವೃದ್ಧಿಯ ಹಳಿ ಮೇಲೆ ತಂದು ನಿಲ್ಲಿಸುತ್ತೇನೆ ಎಂದರು.
ಬೆಂಗಳೂರಿನ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 2ನೇ ದಿನವೂ ಜನತಾಮಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಸಹಸ್ರಾರು ಜನರು ಅಭಿಮಾನದಿಂದ ಪಾಲ್ಗೊಂಡು 2023ಕ್ಕೆ @JanataDal_S ಪಕ್ಷದ ಜನಪರ ಸರಕಾರ ಬರಲಿ ಎಂದು ಹಾರೈಸಿದರು.#ಜೆಡಿಎಸ್_ಜನತಾಮಿತ್ರ pic.twitter.com/BOOVbvy05k
— H D Kumaraswamy (@hd_kumaraswamy) July 3, 2022
ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಮಂತ್ರಿಯಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ದ ಹರಿಹಾಯ್ದ ಕುಮಾರಸ್ವಾಮಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈಗ ಹೆಣ್ಣು ಮಕ್ಕಳಿಗೆ ಅರಿಶಿಣ- ಕುಂಕುಮ ಕೊಡುತ್ತೇನೆ. ಲಿಲತಾ ಸಹಸ್ರನಾಮ ಕಾರ್ಯಕ್ರಮ ಏರ್ಪಡಿಸುತ್ತೇನೆ ಎಂದು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಜನರ ಬದುಕು ಹಸನಾಗುತ್ತದೆಯೇ? ಗೆದ್ದು ಹೋಗಿ ಮಂತ್ರಿಯಾದ ಮೇಲೆ ಸರ್ಕಾರಿ ಭೂಮಿ ಲಪಟಾಯಿಸಿ ಬಳಿಕ ಜಾಮೀನಿಗಾಗಿ ಕೋರ್ಟ್ ಕಚೇರಿ ಅಂತಾ ಅಲೆಯುತ್ತಾರೆ ಎಂದು ಪ್ರಹಾರ ನಡೆಸಿದರು.