ನಕಲಿ ಟಿಟಿಇ ಬಂಧನ: ತಪ್ಪಾಗಿ ಅಮಾನತುಗೊಂಡಿದ್ದ ಮೈಸೂರು ವಿಭಾಗದ ಸಿಬ್ಬಂದಿಗೆ ಸಿಕ್ಕಿತು ನ್ಯಾಯ!

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ಸಿಬ್ಬಂದಿಗಳು ಹಗರಣವೊಂದನ್ನು ಬಯಲಿಗೆಳೆದಿದ್ದು, ವ್ಯಕ್ತಿಯೋರ್ವ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಸೋಗಿನಲ್ಲಿ ಪ್ರಯಾಣಿಕರಿಂದ ಅಕ್ರಮವಾಗಿ ಹಣ ಪಡೆಯುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ನಕಲಿ ಟಿಟಿಇ ಬಂಧನ
ನಕಲಿ ಟಿಟಿಇ ಬಂಧನ

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ಸಿಬ್ಬಂದಿಗಳು ಹಗರಣವೊಂದನ್ನು ಬಯಲಿಗೆಳೆದಿದ್ದು, ವ್ಯಕ್ತಿಯೋರ್ವ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಸೋಗಿನಲ್ಲಿ ಪ್ರಯಾಣಿಕರಿಂದ ಅಕ್ರಮವಾಗಿ ಹಣ ಪಡೆಯುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
 
ಕನಕಪುರದ ಮೂಲದ ವ್ಯಕ್ತಿ ಮಲ್ಲೇಶ್ ಟಿಟಿಇ ಸೋಗಿನಲ್ಲಿ ಪ್ರಯಾಣಿಕರಿಂದ ದಿನವೊಂದಕ್ಕೆ 7,000 ರೂಪಾಯಿಗಳನ್ನು ಸಂಪಾದಿಸುತ್ತಿದ್ದ. ಇದೇ ಹಣವನ್ನು ಆತ ಮದ್ಯಸೇವನೆಗೆ ಬಳಸುತ್ತಿದ್ದ. 

ಟಿಪ್ಪು ಎಕ್ಸ್ ಪ್ರೆಸ್ ನಲ್ಲಿದ್ದ ಟಿಟಿಇ ಸಿಬ್ಬಂದಿ ನೀಡಿದ ಮಾಹಿತಿಯ ಆಧಾರದಲ್ಲಿ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಅರ್ಧ ಸಮವಸ್ತ್ರ ಧರಿಸಿ, ನಕಲಿ ರೈಲ್ವೆ ಟ್ಯಾಗ್ ಧರಿಸಿ ವಾಕಿಟಾಕಿ ಹಿಡಿದು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದಾಗ ಈತನ ಬಗ್ಗೆ ಅನುಮಾನ ಮೂಡಿದೆ. ಟಿಟಿಇ ಲಾಬಿ ಇನ್ ಚಾರ್ಜ್ ಭಾಸ್ಕರ್ ಎಂಬುವವರು ಈ ಬಗ್ಗೆ ಮಾಹಿತಿ ಪಡೆದಿದ್ದು ಆತನನ್ನು ಹಿಂಬಾಲಿಸಿ ವಶಕ್ಕೆ ಪಡೆದಿದ್ದಾರೆ.
 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ರೈಲ್ವೆ ಸಿಬ್ಬಂದಿಗಳ ಸಮ್ಮುಖದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಮಲ್ಲೇಶ್, ಗುತ್ತಿಗೆ ಆಧಾರದಡಿ ತಾನು ಬೆಡ್ ರೋಲ್ ಬಾಯ್ ಆಗಿ ಕೆಲ ಸಮಯ ಕಾರ್ಯನಿರ್ವಹಿಸುತ್ತಿದ್ದೆ. ಆಗ ಟಿಟಿಇ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಂಡಿದ್ದೆ ಎಂದು ಹೇಳಿದ್ದಾನೆ. 

ಬಂಧಿತ ವ್ಯಕ್ತಿ, ನಕಲಿ ರೈಲ್ವೆ ಗುರುತಿನ ಚೀಟಿಯನ್ನು ಪಡೆಯುವುದಕ್ಕಾಗಿ 50 ರೂಪಾಯಿ ಖರ್ಚು ಮಾಡಿದ್ದರು. ಗಾಂಧಿಬಜಾರ್ ನಿಂದ ವಾಕಿ ಟಾಕಿಯನ್ನು 700 ರೂಪಾಯಿಗೆ ಖರೀದಿಸಿದ್ದು, ಟಿಟಿಇ ರೀತಿಯಲ್ಲಿ ತಯಾರಾಗುವುದಕ್ಕಾಗಿ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಸ್ಪೋರ್ಟ್ಸ್ ಶೂ ಧರಿಸುತ್ತಿದ್ದ 

ದೂರದ ಊರುಗಳಿಂದ, ಪ್ರಮುಖವಾಗಿ ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು ಧರ್ಮಾವರಂ ಸೆಕ್ಷನ್ ಗಳಿಂದ ಬರುತ್ತಿದ್ದ ಜನರೇ ಇವನ ಟಾರ್ಗೆಟ್ ಆಗಿದ್ದು, ಅಕ್ರಮವಾಗಿ ಜನರನ್ನು ಗುರಿಯಾಗಿರಿಸಿಕೊಂಡು ಅವರಿಂದ ಹಣ ಪಡೆಯುತ್ತಿದ್ದ. 

6 ತಿಂಗಳ ಕಾಲ ವಾರಕ್ಕೆ ಒಂದು ದಿನದಂತೆ ಈ ರೀತಿ ಮಾಡಿದ್ದೇನೆ. ದಿನವೊಂದಕ್ಕೆ 5,000-7,000 ರೂಪಾಯಿಗಳನ್ನು ಗಳಿಸುತ್ತಿದ್ದೆ. ಈ ವರೆಗೂ 60,000-70,000 ಹಣ ಗಳಿಸಿದ್ದು, ಅದನ್ನು ಮದ್ಯ ಸೇವನೆಗೆ ಬಳಸಿದ್ದೇನೆ ಎಂದು ಆರೋಪಿ ಮಾಹಿತಿ ನೀಡಿದ್ದಾನೆ.

ಇತ್ತೀಚೆಗಷ್ಟೇ ಅಂದರೆ ಜೂ.23 ರಂದು ಬೆಂಗಳೂರು-ಹುಬ್ಬಳ್ಳಿ ಸೆಕ್ಷನ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿದ್ದ ಈ ನಕಲಿ ಟಿಟಿಇ ಕುಟುಂಬವೊಂದಕ್ಕೆ ರೈಲಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ 7,000 ರೂಪಾಯಿ ಪಡೆದಿದ್ದಾನೆ. ಆದರೆ ಹಣ ಪಡೆದ ನಂತರ ಮುಂದಿನ ನಿಲ್ದಾಣದಲ್ಲಿ ಇಳಿದುಹೋಗಿದ್ದಾನೆ. ಮೋಸ ಹೋದ ಕುಟುಂಬ ಸದಸ್ಯರು ನಿಜವಾಗಿಯೂ ಟಿಟಿಇ ತಮ್ಮಿಂದ ಹಣ ಪಡೆದು ವಂಚಿಸಿದ್ದಾರೆಂದು ಭಾವಿಸಿ ರೈಲ್ವೆ ಇಲಾಖೆಗೆ ದೂರು ನೀಡಿದ್ದರು. ಈ ಆರೋಪ ಇದೇ ರೈಲಿನಲ್ಲಿ ನಿಯೋಜಿಸಲಾಗಿದ್ದ ನೈಜ ಟಿಟಿಇ ಸುನಿಲ್ ಅವರ ಮೇಲೆ ಬಂದಿತ್ತು. ರೈಲ್ವೆ ಇಲಾಖೆ ನಕಲಿ ಟಿಟಿಇ ಮಾಡಿದ್ದ ಕೆಲಸಕ್ಕೆ ನೈಜ ಟಿಟಿಇ ಸುನಿಲ್ ಅವರನ್ನು 14 ದಿನಗಳ ಕಾಲ ಅಮಾನತುಗೊಳಿಸಿತ್ತು. ಈಗ ನಕಲಿ ಟಿಟಿಇ ಬಂಧನದ ಮೂಲಕ ವಿನಾಕಾರಣ ಆರೋಪ ಎದುರಿಸುತ್ತಿದ್ದ ನೈಜ ಟಿಟಿಇಗೆ ನ್ಯಾಯ ದೊರೆತಂತಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com