ಚಂದ್ರಶೇಖರ್ ಗುರೂಜಿ ಹತ್ಯೆ ನಡೆದಿದ್ದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ: ಹೋಟೆಲ್ ಭದ್ರತಾ ಲೋಪದ ಬಗ್ಗೆ ಗರಂ

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಡಿಜಿಪಿ ಅಲೋಕ್ ಕುಮಾರ್ ಗುರುವಾರ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಬ್ಬಳ್ಳಿಗೆ ಅಲೋಕ್ ಕುಮಾರ್ ಭೇಟಿ
ಹುಬ್ಬಳ್ಳಿಗೆ ಅಲೋಕ್ ಕುಮಾರ್ ಭೇಟಿ

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಡಿಜಿಪಿ ಅಲೋಕ್ ಕುಮಾರ್ ಗುರುವಾರ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಬ್ಬಳ್ಳಿಯ ಉಣಕಲ್ ಬಳಿಯ ಪ್ರೆಸಿಡೆಂಟ್ ಹೋಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದರು. ಹತ್ಯೆಯ ಬಗ್ಗೆ ಮಾಹಿತಿ ಪಡೆದ ಅಲೋಕ್ ಕುಮಾರ್, ಹೋಟೆಲ್ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಹೋಟೆಲ್ ನ ಭದ್ರತಾ ಲೋಪದ ಬಗ್ಗೆ ಅಲೋಕ್ ಕುಮಾರ್ ಗರಂ ಆಗಿದ್ದಾರೆ.

ಹೋಟೆಲ್ ಭದ್ರತಾ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಉದ್ಯಮಿಗಳು ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳು ಭೇಟಿ ನೀಡುವ ಹೋಟೆಲ್‌ನ ಪ್ರವೇಶದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ವ್ಯವಸ್ಥೆ ಹಾಗೂ ವ್ಯಕ್ತಿಗಳ ತಪಾಸಣೆ ಮಾಡದೆ ಹಾಗೆಯೇ ಬಿಡುವುದರ ಕುರಿತು, ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹೋಟೆಲ್ ಮುಂಭಾಗ ಸೆಕ್ಯೂರಿಟಿ ಇದ್ದರು ಆರೋಪಿಗಳು ಹೇಗೆ ಪರಾರಿಯಾದರು ಎಂದು ಪ್ರಶ್ನಿಸಿದ್ದಾರೆ.

ನಂತರ ವಿದ್ಯಾನಗರ ಠಾಣೆಗೆ ಬಂದ ಅವರು, ಪ್ರಕರಣದ ತನಿಖೆಯ ಬೆಳವಣಿಗೆ ಕುರಿತು ಮಾಹಿತಿ ಪಡೆದರು. ಪೊಲೀಸ್ ಕಮಿಷನರ್ ಲಾಭೂರಾಮ್, ಡಿಸಿಪಿಗಳಾದ ಗೋಪಾಲ ಬ್ಯಾಕೋಡ, ಸಾಹಿಲ್ ಬಾಗ್ಲಾ, ಎಸಿಪಿ ವಿನೋದ ಮುಕ್ತೇದಾರ ಹಾಗೂ ಇನ್ಸ್‌ಪೆಕ್ಟರ್‌ಗಳು ಇದ್ದರು.

ಪ್ರೆಸಿಡೆಂಟ್ ಹೋಟೆಲ್ ನಂತರ ಹುಬ್ಬಳ್ಳಿಯ ಕೆಲ ಸ್ಟಾರ್ ಹೋಟೆಲ್ ಗಳಿಗೂ ಅಲೋಕ್ ಕುಮಾರ್ ಭೇಟಿ ನೀಡಿದ್ದರು. ಸ್ಟಾರ್ ಹೋಟೆಲ್ ಗಳಲ್ಲಿ ವಿವಿಐಪಿಗಳೇ ಹೆಚ್ಚಾಗಿ ವಾಸ್ತವ್ಯ ಮಾಡುವ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತೆಯ ಕುರಿತು ಪರಿಶೀಲನೆ ಮಾಡಿ, ಹೋಟೆಲ್ ಗಳಿಂದ ಮಾಹಿತಿ ಪಡೆದರು. ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಆದಂತೆ ಬೇರೆ ಕಡೆ ಅಹಿತಕರ ಘಟನೆ ನಡೆಯದಿರುವಂತೆ ಅಗತ್ಯ ಭದ್ರತೆ ಕಲ್ಪಿಸುವಂತೆ ಹೋಟೆಲ್ ಆಡಳಿತ ಮಂಡಳಿಗೆ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ದೊಡ್ಡ ಹೋಟೆಲ್‌ಗಳಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳನ್ನು ಪೊಲೀಸರು ಪರಿಶೀಲಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ ವಿಮಾನ, ರಸ್ತೆ ಮತ್ತು ರೈಲ್ವೆ ಮೂಲಕ ಉತ್ತಮ ಸಂಪರ್ಕವನ್ನು ಅನುಸರಿಸಿ, ಉತ್ತರ ಕರ್ನಾಟಕದ ಇತರ ಭಾಗಗಳನ್ನು ತಲುಪಲು ಅನೇಕ ಜನರು, ಉದ್ಯಮಿಗಳು ಮತ್ತು ವಿಐಪಿಗಳು ನಗರಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ ಮತ್ತು ಅವರು ದೊಡ್ಡ ಹೋಟೆಲ್‌ಗಳಲ್ಲಿ ತಂಗುತ್ತಾರೆ.

ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಶೀಘ್ರದಲ್ಲೇ ಹೋಟೆಲ್ ಆಡಳಿತದೊಂದಿಗೆ ಸಭೆ ನಡೆಸಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬೂ ರಾಮ್ ಹೇಳಿದ್ದಾರೆ. ಮಾರ್ಗಸೂಚಿಗಳ ಪ್ರಕಾರ ಭದ್ರತಾ ಕ್ರಮಗಳನ್ನು ಅನುಸರಿಸಲು ಎಲ್ಲಾ ಹೋಟೆಲ್‌ಗಳಿಗೆ ಸೂಚನೆ ನೀಡಲಾಗುವುದು, ಒಂದು ವೇಳೆ ಅನುಸರಿಸಲು ವಿಫಲವಾದರೆ ಅವರಿಗೆ ನೋಟಿಸ್ ನೀಡಲಾಗುವುದು ಮತ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com