ಭಾರೀ ಮಳೆ: ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಕರ್ನಾಟಕದ ನೇತ್ರಾವತಿ ನದಿ

ರಾಜ್ಯಾದ್ಯಂತ ವ್ಯಾಪಕ ಮಳೆ ಮುಂದುವರೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯಲ್ಲಿ ಭಾನುವಾರ ನೀರಿನ ಮಟ್ಟ 8.5 ಮೀಟರ್‌ನಷ್ಟು ಏರಿಕೆಯಾಗಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದಕ್ಷಿಣ ಕನ್ನಡ: ರಾಜ್ಯಾದ್ಯಂತ ವ್ಯಾಪಕ ಮಳೆ ಮುಂದುವರೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯಲ್ಲಿ ಭಾನುವಾರ ನೀರಿನ ಮಟ್ಟ 8.5 ಮೀಟರ್‌ನಷ್ಟು ಏರಿಕೆಯಾಗಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಶನಿವಾರ 6.8 ಮೀಟರ್‌ನಷ್ಟಿದ್ದ ನೀರಿನ ಮಟ್ಟವು ಸಂಜೆ ಗಣನೀಯವಾಗಿ ಏರಿಕೆಯಾಗಿದ್ದು, ಉಪ್ಪಿನಂಗಡಿಯಲ್ಲಿ ಭಾನುವಾರ ಬೆಳಿಗ್ಗೆ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬಂಟ್ವಾಳದ ನದಿ ಪಾತ್ರದ ಎಲ್ಲಾ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ಪಾಣೆಮಂಗಳೂರು, ಕಂಚಿಕಾರ್ ಮಾರುಕಟ್ಟೆ, ಜಕ್ರಿಬೆಟ್ಟು, ಕೈಕುಂಜೆ ಬಸ್ತಿಪಡ್ಪು ಸೇರಿದಂತೆ ಪ್ರದೇಶಗಳು ಮುಳುಗಡೆಯಾಗಿವೆ. ಬಂಟ್ವಾಳ ತಾಲೂಕು ತಹಶೀಲ್ದಾರ್ ಸ್ಮಿತಾರಾಮು ಹಾಗೂ ಪೊಲೀಸ್ ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮಂಗಳವಾರದವರೆಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ದೋಣಿಗಳು, ಮುಳುಗು ತಜ್ಞರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಪ್ರದೇಶಕ್ಕೆ ಕರೆಸಲಾಗಿದೆ. ಇದೇ ವೇಳೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಹಲವು ಭಾಗಗಳಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ.

ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಸಶಿಹಿತ್ಲು, ಉಚ್ಚಿಲ, ಉಳ್ಳಾಲ ಮತ್ತು ಬಟ್ಪಾಡಿಯಲ್ಲಿ ಕರಾವಳಿಯಲ್ಲಿ ಭಾರಿ ಹಾನಿ ಸಂಭವಿಸಿದ್ದು, ಮರವಂತೆ, ಕಾಪು, ಪಡುಬಿದ್ರಿ, ಶೀರೂರು, ಉಡುಪಿಯ ಕಿರಿಮಂಜೇಶ್ವರ ಸೇರಿದಂತೆ ಹಲವೆಡೆ ಹಾನಿಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com