ಮಳೆ ಹಾನಿ ನಷ್ಟದ ಮಾಹಿತಿ ಇಂದು ಸಂಜೆಯೊಳಗೆ ಬಿಡುಗಡೆ; ಕೊಡಗು ಜಿಲ್ಲೆಯಲ್ಲಿ ಸಿಎಂ ಬೊಮ್ಮಾಯಿ ಪ್ರವಾಸ

ರಾಜ್ಯದಲ್ಲಿ ಮಳೆ ಹಾನಿಯಿಂದ ಇಲ್ಲಿಯವರೆಗೆ ಉಂಟಾಗಿರುವ ನಷ್ಟದ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದ್ದು, ನಷ್ಟದ ಪ್ರಮಾಣ ಎಷ್ಟಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಇಂದು ಸಂಜೆ ಮಾಧ್ಯಮಗಳ ಮೂಲಕ ಜನತೆಗೆ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು: ರಾಜ್ಯದಲ್ಲಿ ಮಳೆ ಹಾನಿಯಿಂದ ಇಲ್ಲಿಯವರೆಗೆ ಉಂಟಾಗಿರುವ ನಷ್ಟದ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದ್ದು, ನಷ್ಟದ ಪ್ರಮಾಣ ಎಷ್ಟಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಇಂದು ಸಂಜೆ ಮಾಧ್ಯಮಗಳ ಮೂಲಕ ಜನತೆಗೆ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಳೆ ಅನಾಹುತ ಹೆಚ್ಚಾಗಿರುವ ಜಿಲ್ಲೆಗಳಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಕೊಡಗು ಜಿಲ್ಲೆಗೆ ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಇನ್ನಿತರ ಕೆಲವು ಸಚಿವರು, ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ತೆರಳಿದ್ದಾರೆ. 

ಈ ಸಂದರ್ಭದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಪ್ರಕೃತಿ ವಿಕೋಪ ನಿಧಿಯಡಿಯಲ್ಲಿ 739 ಕೋಟಿ ರೂಪಾಯಿ ಪರಿಹಾರ ಧನ ಸರ್ಕಾರದ ಖಜಾನೆಯಲ್ಲಿದ್ದು ಸದ್ಯಕ್ಕೆ ಹಣದ ಕೊರತೆಯಿಲ್ಲ. ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕನ್ನಡ ಭಾಗಗಳಲ್ಲಿ ಭಾರೀ ಮಳೆಗೆ ಜೀವಹಾನಿಯಾಗಿದೆ. ಮನೆಗಳು ಹಾನಿಗೀಡಾಗಿವೆ. ಕೊಡಗು, ಉತ್ತರ ಕನ್ನಡಗಳಲ್ಲಿ ಭೂಕುಸಿತ ಉಂಟಾಗಿದೆ. ಅತಿ ಹೆಚ್ಚು ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಉತ್ತರ ಕನ್ನಡದಲ್ಲಿ ಅನೇಕ ಮನೆಗಳು ಕುಸಿದಿವೆ. ಒಟ್ಟಾರೆ ರಾಜ್ಯದಲ್ಲಿ ಸಂಭವಿಸಿರುವ ಅನಾಹುತಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದು ಸಂಪೂರ್ಣ ಚಿತ್ರಣ ಇಂದು ಸಾಯಂಕಾಲದೊಳಗೆ ತಿಳಿದುಬರಲಿದೆ ಎಂದರು.

ನದಿ ದಡದಲ್ಲಿರುವ ಮನೆಗಳು ಮತ್ತು ಊರುಗಳು ಮುಳುಗಡೆಯಾಗುವ ಭೀತಿ ಎದುರಿಸುತ್ತಿದ್ದರೆ ಅಲ್ಲಿನ ಜನರನ್ನು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು ಸರ್ಕಾರ ತಜ್ಞರ ಸಲಹೆ ಕೇಳಿದ್ದು ಅವರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಪಕ್ಷದವರು ಸುಳ್ಳು ಹೇಳುತ್ತಿದ್ದಾರೆ: ಪ್ರವಾಹಪೀಡಿತ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡುತ್ತಿಲ್ಲ ಎಂಬುದು ಸುಳ್ಳು. ನಮ್ಮ ಸಚಿವರು ಕಾರ್ಯಪ್ರವೃತ್ತರಾಗಿದ್ದಾರೆ. ಉಡುಪಿಯಲ್ಲಿ ಸಚಿವರಾದ ಅಂಗಾರ, ಮಂಗಳೂರಿನಲ್ಲಿ ಸುನಿಲ್ ಕುಮಾರ್, ಉತ್ತರ ಕನ್ನಡದಲ್ಲಿ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್ ಉಡುಪಿಗೆ ಭೇಟಿ ನೀಡಿದ್ದಾರೆ. ನಿನ್ನೆ ಶಿರಾಡಿ ಘಾಟ್ ಗೆ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿದ್ದಾರೆ. ಸಚಿವರುಗಳು ನಿರಂತರವಾಗಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.

ನಾನು ಕೂಡ ಪ್ರವಾಹ ಪೀಡಿತ, ಹಾನಿಗೊಳಗಾಗಿರುವ ಜಿಲ್ಲೆಗಳ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಕಷ್ಟ ಆಲಿಸುತ್ತೇನೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡುತ್ತೇನೆ. ಸರ್ಕಾರ ಜನರ ಜೊತೆಗೆ ನಿಲ್ಲುತ್ತದೆ ಎಂದರು.

ನಿಗಮ ಮಂಡಳಿಗಳಿಗೆ ನೇಮಕ, ಯಾರಿಂದಲೂ ರಾಜೀನಾಮೆ ಕೇಳಿಲ್ಲ: ನಿಗಮ-ಮಂಡಳಿಗಳಲ್ಲಿ ಒಂದೂವರೆ ವರ್ಷ ಅಧಿಕಾರ ಪೂರೈಸಿದವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದರು. ಇನ್ನು ಯಾವ ಸಚಿವರಿಂದಲೂ ರಾಜೀನಾಮೆ ಕೇಳಿಲ್ಲ. ಬಿಜೆಪಿ ಕೋರ್ ಕಮಿಟಿ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com