ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ: ಉತ್ತರ ಕನ್ನಡದ ಹಳಿಯಾಳದಲ್ಲಿ ಮನೆಗೋಡೆ ಕುಸಿದು ತಾಯಿ-ಮಗಳು ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕಾಣಿಯೂರು ಬಳಿ ಮೊನ್ನೆ ಶನಿವಾರ ರಾತ್ರಿ ಹೊಳೆಗೆ ಕಾರು ಬಿದ್ದು ಕೊಚ್ಚಿ ಹೋಗಿದ್ದ ಇಬ್ಬರು ಯುವಕರಲ್ಲಿ ಓರ್ವನ ಶವ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಶವದ ಗುರುತನ್ನೂ ಇನ್ನೂ ಪತ್ತೆಹಚ್ಚಬೇಕಿದೆ.
ಉಡುಪಿ ಜಿಲ್ಲೆಯ ಕಾಪುವಿನ ಬಳಿ ಮಳೆಪೀಡಿತ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಉಡುಪಿ ಜಿಲ್ಲೆಯ ಕಾಪುವಿನ ಬಳಿ ಮಳೆಪೀಡಿತ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉತ್ತರ ಕನ್ನಡ/ದಕ್ಷಿಣ ಕನ್ನಡ/ಕೊಡಗು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕಾಣಿಯೂರು ಬಳಿ ಮೊನ್ನೆ ಶನಿವಾರ ರಾತ್ರಿ ಹೊಳೆಗೆ ಕಾರು ಬಿದ್ದು ಕೊಚ್ಚಿ ಹೋಗಿದ್ದ ಇಬ್ಬರು ಯುವಕರಲ್ಲಿ ಓರ್ವನ ಶವ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಶವದ ಗುರುತನ್ನೂ ಇನ್ನೂ ಪತ್ತೆಹಚ್ಚಬೇಕಿದೆ.

ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ವರುಣಾರ್ಭಟ ಮುಂದುವರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಕಡೆಗಳಲ್ಲಿ ಮಳೆಯ ಅವಾಂತರಗಳು ಮುಂದುವರಿದಿವೆ. ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಗೆ ಮನೆಯ ಗೋಡೆ ಇಂದು ನಸುಕಿನ ಜಾವ ಕುಸಿದುಬಿದ್ದು ತಾಯಿ-ಮಗಳು ಮೃತಪಟ್ಟಿದ್ದಾರೆ. ಹಳಿಯಾಳ ತಾಲ್ಲೂಕಿನ ಮುರ್ಕವಾಡ ಗ್ರಾಮದಲ್ಲಿ ಇಂದು ನಸುಕಿನ ಜಾವ ಭಾರೀ ಮಳೆಗೆ ಗೋಡೆ ಕುಸಿದು ಮನೆಯಲ್ಲಿ ಮಲಗಿದ್ದ ತಾಯಿ ಮಗಳು ಮೃತಪಟ್ಟಿದ್ದಾರೆ. 37 ವರ್ಷದ ರುಕ್ಮಿಣಿ ವಿಠಲ್ ಮಾಚಕ ಮತ್ತು 13 ವರ್ಷದ ಬಾಲಕಿ ಶ್ರೀದೇವಿ ಮೃತಪಟ್ಟವರಾಗಿದ್ದಾರೆ.

ಉತ್ತರ ಕನ್ನಡದ ಅಂಶಿಘಾಟ್ ನಲ್ಲಿ ಸಂಭವಿಸಿದ ಭೂಕುಸಿತದಿಂದ ಇಡೀ ದಿನ ಸಂಚಾರ ಸ್ಥಗಿತಗೊಂಡಿದೆ. 

ಚಿಕ್ಕಮಗಳೂರಿನ ಬಸ್ ನಿಲ್ದಾಣದಲ್ಲಿ ಕಂಪೌಂಡ್ ಕುಸಿದು ಬಿದ್ದು ಎರಡು ಕಾರುಗಳು ಜಖಂಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹೆಬ್ಬಾರಬೈಲ್ ನಲ್ಲಿ ಭೂಕುಸಿತವಾಗಿದೆ. ಇಲ್ಲಿ ಭೂಕುಸಿತದಿಂದಾಗಿ ಎರಡು ಮನೆಗಳು ಅಪಾಯದಲ್ಲಿವೆ. ಷರೀಫ್ ಮತ್ತು ಜಾರ್ಜ್ ಎಂಬುವವರ ಮನೆಗಳು ಕುಸಿಯುವ ಭೀತಿ ಎದುರಿಸುತ್ತಿವೆ. 

ಕೊಡಗು ಜಿಲ್ಲೆಯ ಅಟ್ಟಿಹೊಳೆ ಉಕ್ಕಿ ಹರಿಯುತ್ತಿದ್ದು ಮುಕ್ಕೋಡ್ಲು-ಹೆಮ್ಮತ್ತಾಳು ಸಂಪರ್ಕ ಕಡಿತಗೊಂಡಿವೆ. ಗ್ರಾಮಕ್ಕೆ ಸಂಪರ್ಕವಿಲ್ಲದೆ 30 ಕುಟುಂಬಗಳು ಪರದಾಡುವಂತಾಗಿದೆ. ಶಿವಮೊಗ್ಗ, ಉಡುಪಿಗಳಲ್ಲಿಯೂ ವ್ಯಾಪಕ ಧಾರಾಕಾರ ಮಳೆ ಮುಂದುವರಿದಿದೆ. 

ಹವಾಮಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ನಿನ್ನೆ ಉಡುಪಿ ಜಿಲ್ಲೆಯ ಕಾಪುವಿನ ಕಡಲ ಕೊರೆತ ಪೀಡಿತ ಪ್ರದೇಶಗಳಿಗೆ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದು, ದಡವನ್ನು ರಕ್ಷಿಸಲು ಬ್ರೇಕ್‌ವಾಟರ್ ನಿರ್ಮಾಣದತ್ತ ಗಮನ ಹರಿಸಿದರು. ಬ್ರೇಕ್‌ವಾಟರ್ ಸಮುದ್ರದ ಸವೆತವನ್ನು ತಡೆಯುವ ವೈಜ್ಞಾನಿಕ ವಿಧಾನವಾಗಿದೆ, ಬ್ರೇಕ್‌ವಾಟರ್ ನಿರ್ಮಾಣಕ್ಕೆ ಹೆಚ್ಚಿನ ಹಣದ ಅಗತ್ಯವಿದೆ ಎಂದು ಅವರು ಹೇಳಿದರು.

ಹಾವೇರಿ ಜಿಲ್ಲೆಯಲ್ಲಿಯೂ ಮಳೆ ಆರ್ಭಟ ಮುಂದುವರಿದಿದ್ದು ಹಲವೆಡೆ ಮನೆ ಮೇಲ್ಛಾವಣಿ ಕುಸಿದಿದೆ. ರಟ್ಟೀಹಳ್ಳಿ ತಾಲ್ಲೂಕಿನ ಚಿಕ್ಕಕಬ್ಬಾರ, ಹಿರೇಕಬ್ಬಾರ, ಅಣಜಿ ಗ್ರಾಮ, ಗುಡ್ಡದಮಾದಾಪುರದಲ್ಲಿ ಮನೆ ಮೇಲ್ಛಾವಣಿ, ಗೋಡೆ ಕುಸಿದಿವೆ. 

ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರಿಕೆ?: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಇನ್ನೂ 5 ದಿನಗಳ ಕಾಲ ವ್ಯಾಪಕ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. ರಾಜ್ಯದ ಕರಾವಳಿ ಭಾಗ, ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣವಿರುತ್ತದೆ. 

ರಾಜ್ಯದ ವಿವಿಧ ಭಾಗಗಳಲ್ಲಿ ಜುಲೈ 14ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 13ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಅದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com