ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರುನಾಡಿನಲ್ಲಿ ಮುಂದುವರಿದ 'ಮಹಾಮಳೆ': ಹವಾಮಾನ ಇಲಾಖೆ ಎಚ್ಚರಿಕೆ, ಅಲ್ಲಲ್ಲಿ ಅವಘಡ

ರಾಜ್ಯದ ಕೊಡಗು, ಚಿಕ್ಕಮಗಳೂರು, ಮಂಡ್ಯ ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ದೇಗುಲ, ಮಂಟಪಗಳು ಮುಳುಗಡೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಇಂದು ಕೊಂಚ ಕಡಿಮೆಯಾಗಿದ್ದರೂ ಮಂಗಳೂರಿಲ್ಲಿ, ಸಮುದ್ರ ತೀರದಲ್ಲಿ ನಿರಂತರ ಮಳೆ ಮುಂದುವರಿದಿದೆ. 

ಬೆಂಗಳೂರು; ರಾಜ್ಯದ ಕೊಡಗು, ಚಿಕ್ಕಮಗಳೂರು, ಮಂಡ್ಯ ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ದೇಗುಲ, ಮಂಟಪಗಳು ಮುಳುಗಡೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಇಂದು ಕೊಂಚ ಕಡಿಮೆಯಾಗಿದ್ದರೂ ಮಂಗಳೂರಿಲ್ಲಿ, ಸಮುದ್ರ ತೀರದಲ್ಲಿ ನಿರಂತರ ಮಳೆ ಮುಂದುವರಿದಿದೆ. 

ಮಲೆನಾಡು, ಕರಾವಳಿ, ಕೊಡಗು ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಆಯಾ ಜಿಲ್ಲೆಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಮಲೆನಾಡಿನಲ್ಲಿ ಮಹಾಮಳೆ ಮುಂದುವರಿದಿದ್ದು, ಕುಮದ್ವತಿ, ವರದಾ, ತುಂಗಭದ್ರಾ ನದಿಗಳು ತುಂಬಿಹರಿಯುತ್ತಿವೆ. ಮಹಾ ಪ್ರಳಯಕ್ಕೆ ಐತಿಹಾಸಿಕ ಮಂಟಪಗಳು ಮುಳುಗಿಹೋಗಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀಕೃಷ್ಣದೇವರಾಯನ ಸಮಾಧಿ ಮಂಟಪ ಮುಳುಗಡೆಯಾಗಿದೆ. ಇಂದು ನಡೆಯಬೇಕಿದ್ದ ರಘುವರ್ಮ ಮಹೋತ್ಸವ ರದ್ದಾಗಿದೆ. ಐತಿಹಾಸಿಕ ಹಂಪಿಯ ಪುರಂದರ ಮಂಟಪ, ರಾಮಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ ಮಂಟಪ ಮುಳುಗಡೆಯಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ 2018ರಲ್ಲಿ ಕಂಡ ಜಲಪ್ರಳಯ ಮತ್ತೆ ನೆನಪಿಸುತ್ತಿದೆ. ಪ್ರವಾಸಿಗರು ನೀರಿಗಿಳಿಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 

ಮಲೆನಾಡಿನಲ್ಲಿ ಮುಂದುವರಿದ ಮಹಾ ಅಬ್ಬರ: ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೂಡ ವರ್ಷಧಾರೆ ಮುಂದುವರಿದಿದ್ದು ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲ್ಲೂಕಿನಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಸನದಲ್ಲಿ ಮಳೆ ಮುಂದುವರಿದ ಕಾರಣ ಕೆಲವು ತಾಲ್ಲೂಕುಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಾನಿಯಾದ ಮನೆಗಳ ಸದಸ್ಯರಿಗೆ 10 ಸಾವಿರ ರೂಪಾಯಿ ಚೆಕ್ ವಿತರಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದ್ದಾರೆ. 

ಹಾವೇರಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಕುಮದ್ವತಿ, ವರದಾ, ತುಂಗಭದ್ರಾ, ಧರ್ಮಾ ನದಿಗಳು ತುಂಬಿ ಹರಿಯುತ್ತಿವೆ. ಮಂಡ್ಯದ ಕೆ ಆರ್ ಎಸ್ ಡ್ಯಾಮ್ ನಿಂದ ನೀರನ್ನು ಹೊರಗೆ ಬಿಡಲಾಗಿದೆ. 

ಕಾವೇರಿ ಸಂಗಮದಲ್ಲಿ ಕೊಚ್ಚಿಹೋದ ಯುವಕ: ನಿನ್ನೆ ಕಾವೇರಿ ನದಿ ಸಂಗಮದಲ್ಲಿ ಬೆಂಗಳೂರು ಮೂಲದ ಅಶೋಕ್ ಎಂಬ ವ್ಯಕ್ತಿ ಕೊಚ್ಚಿ ಹೋಗಿದ್ದು ಅವರ ಶೋಧಕ್ಕೆ ಕಾರ್ಯಾಚರಣೆ ಆರಂಭವಾಗಿದೆ.

ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯಲ್ಲಿ ವರ್ಷಧಾರೆ ಹಿನ್ನೆಲೆ, ಭಾಗಮಂಡಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಸಂಪರ್ಕ‌ಕಡಿತವಾಗಿದ್ದು, ಭಾಗಮಂಡಲ-ತಲಕಾವೇರಿ ರಸ್ತೆಗೆ ಎರಡು ಮರಗಳು ಉರುಳಿವೆ.

ಮಡಿಕೇರಿ ತಾಲೂಕಿನ ಭಾಗಮಂಡಲ-ತಲಕಾವೇರಿ ರಸ್ತೆ ಸಂಚಾರವೂ ಸ್ಥಗಿತಗೊಂಡಿದ್ದು, ಜನರ ಪರದಾಡುತ್ತಿದ್ದಾರೆ. ಜಿಲ್ಲೆಯ ಪೊನ್ನಂಪೇಟೆ ಭಾಗದಲ್ಲಿ ಬಿರುಗಾಳಿ ಮಳೆಯಾಗಿದ್ದು, ಶ್ರೀಮಂಗಲ-ನಾಲ್ಕೇರಿ ಗ್ರಾಮದ ಸಂಪರ್ಕ ಸೇತುವೆ ಜಲಾವೃತವಾಗಿದೆ. ಸೋಮವಾರಪೇಟೆ ತಾಲ್ಲೂಕಿನಾದ್ಯಂತವೂ ಭಾರೀ ಮಳೆಯಾಗಿದ್ದು, ತಾಲೂಕಿನ ಹಲವು ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕರಾವಳಿ, ಮಲೆನಾಡಿನಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ: ಕರಾವಳಿ ಮತ್ತು ಮಲೆನಾಡಿನ ಹಲವೆಡೆ ಇನ್ನೂ ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು,  ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್, ಹಾಸನ ಸೇರಿ ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಿಗೆ 5 ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಹಾಸನ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್​ ನೀಡಿದ್ದು, ಮುಂದಿನ 48 ಗಂಟೆಗಳು ರಾಜ್ಯದ ಬಹುತೇಕ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com