ಕೊಡಗು: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿಕೆ, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ

ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅನೇಕ ಅವಾಂತರಗಳಿಗೆ ಕಾರಣವಾಗಿದೆ. ಈ ವರ್ಷ ಜೂನ್‌ನಿಂದ ಜಿಲ್ಲೆಯಲ್ಲಿ ಸುಮಾರು 40 ಇಂಚುಗಳಷ್ಟು ಮಳೆ ದಾಖಲಾಗಿದ್ದರೂ ಜಿಲ್ಲೆಯ ಹಲವು ಹೋಬಳಿಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 500 ರಷ್ಟು ಅಧಿಕ ಮಳೆಯಾಗಿದೆ.
ಸೋಮವಾರ ಪೇಟೆಯಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಯ ಚಿತ್ರ
ಸೋಮವಾರ ಪೇಟೆಯಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಯ ಚಿತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅನೇಕ ಅವಾಂತರಗಳಿಗೆ ಕಾರಣವಾಗಿದೆ. ಈ ವರ್ಷ ಜೂನ್‌ನಿಂದ ಜಿಲ್ಲೆಯಲ್ಲಿ ಸುಮಾರು 40 ಇಂಚುಗಳಷ್ಟು ಮಳೆ ದಾಖಲಾಗಿದ್ದರೂ ಜಿಲ್ಲೆಯ ಹಲವು ಹೋಬಳಿಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 500 ರಷ್ಟು ಅಧಿಕ ಮಳೆಯಾಗಿದೆ. ಈ ಮಧ್ಯೆ ಜಿಲ್ಲೆ ಆರೆಂಜ್ ಅಲರ್ಟ್‌ನಲ್ಲಿರುವಾಗಲೂ ರಸ್ತೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಹೆಚ್ಚಾಗುತ್ತಿದೆ.

ಈ ವರ್ಷ ಸೋಮವಾರ ಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಶೇ. 577 ರಷ್ಟು ಅಧಿಕ ಮಳೆ ದಾಖಲಾಗಿದೆ. ಹಾರಂಗಿ ಜಲಾಶಯ ವೇಗವಾಗಿ ಭರ್ತಿಯಾಗುತ್ತಿದೆ. ಒಟ್ಟಾರೇ 2,859 ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 2,854.17 ಅಡಿ ನೀರಿದೆ. 13, 166 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಅನೇಕ ಕಡೆಗಳಲ್ಲಿ ಭೂ ಕುಸಿತದ ವರದಿಯಾಗಿದ್ದು, ಗ್ರಾಮೀಣ ಮತ್ತು ಹೆದ್ದಾರಿ ರಸ್ತೆ ಹಾನಿಗೆ ಕಾರಣವಾಗಿದೆ.

ಭೂ ಕುಸಿತದಿಂದಾಗಿ ಮಂಗಳೂರು- ಮಡಿಕೇರಿ ಹೆದ್ದಾರಿ, ಭಾಗಮಂಡಲ- ಕಾರಿಕೆ, ತಾಳತ್ ಮನೆ- ಮಡಿಕೇರಿ, ಮಡಿಕೇರಿ-ಕುಟಾ ಹೆದ್ದಾರಿ ಮತ್ತು ಎತ್ತಿನಹೊಳೆ ರಸ್ತೆ ಸೇರಿದಂತೆ ಅನೇಕ ಗ್ರಾಮಾಂತರ ಪ್ರದೇಶದ ರಸ್ತೆಗಳಿಗೆ ಹಾನಿಯಾಗಿದೆ.  ರೂ. 2,975. 50 ಲಕ್ಷದಷ್ಟು ಹಾನಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಂದಾಜಿಸಿದೆ. ನಿರಂತರ ಮಳೆಯಿಂದಾಗಿ ಬುಧವಾರ ನೂರಾರು ಮನೆಗಳಗೆ ತೀವ್ರ ಹಾಗೂ ಭಾಗಶ: ಹಾನಿಯಾಗಿದೆ.

ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲ ನಗರ ತಾಲೂಕಿನ 41 ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ 600 ವಿದ್ಯುತ್ ಕಂಬಗಳು, ಐದು ಟ್ರಾನ್ಸ್ ಫಾರ್ಮರ್ ಗಳು ಹಾನಿಯಾಗಿದ್ದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಕ್ಕೆ ಅಂದಾಜು ರೂ. 67.85 ಲಕ್ಷದಷ್ಟು ನಷ್ಟ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಗ್ರಾಮಾಂತರ ಪ್ರದೇಶದ ಅನೇಕ ಶಾಲೆಗಳು ಮುಚ್ಚಿದ್ದರೂ ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಿಸಿಲ್ಲ.

ಮಡಿಕೇರಿ ತಾಲೂಕಿನಲ್ಲಿ 107.18 ಮಿ.ಮೀಟರ್ ಮಳೆಯಾಗಿದೆ. ಸೋಮವಾರ ಪೇಟೆ ಮತ್ತು ವಿರಾಜಪೇಟೆಯಲ್ಲಿ ಕ್ರಮವಾಗಿ 109.8 ಮಿ.ಮಿ. 53.03 ಮಿ.ಮಿ ಮಳೆಯಾಗಿದೆ. ಈ ವರ್ಷದ ಜನವರಿಯಿಂದಲೂ ಜಿಲ್ಲೆಯಲ್ಲಿ 1,563. 71 ಮಿ.ಮಿ ಮಳೆ ದಾಖಲಾಗಿದೆ.ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 1,110.43 ಮಿ.ಮಿ ಮಳೆಯಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com