ಪ್ರವಾಹಪೀಡಿತ ಪ್ರದೇಶಗಳ ಜನರ ರಕ್ಷಣೆ, ಪುನರ್ವಸತಿ ಸರ್ಕಾರದ ಆದ್ಯತೆ: ಸಿಎಂ ಬೊಮ್ಮಾಯಿ

ಕರಾವಳಿ, ಮಲೆನಾಡು ಮಾತ್ರವಲ್ಲದೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿದಂತೆ ಗಡಿ ಕರ್ನಾಟಕ ಭಾಗಗಳಲ್ಲಿ ಕೂಡ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಕಡೆ ಪ್ರವಾಹ ಉಂಟಾಗಿದೆ. ಮಳೆ ಸಂಬಂಧಿ ಜೀವಹಾನಿ, ಅವಘಡಗಳು ಸಂಭವಿಸುತ್ತಲೇ ಇದೆ. 
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಕರಾವಳಿ, ಮಲೆನಾಡು ಮಾತ್ರವಲ್ಲದೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿದಂತೆ ಗಡಿ ಕರ್ನಾಟಕ ಭಾಗಗಳಲ್ಲಿ ಕೂಡ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಕಡೆ ಪ್ರವಾಹ ಉಂಟಾಗಿದೆ. ಮಳೆ ಸಂಬಂಧಿ ಜೀವಹಾನಿ, ಅವಘಡಗಳು ಸಂಭವಿಸುತ್ತಲೇ ಇದೆ. 

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರವಾಹಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸೂಚನೆಯನ್ನು ನೀಡಿದ್ದೇನೆ. ಪ್ರವಾಹ ಇರುವ ಜಿಲ್ಲೆಗಳ ನದಿಗಳಲ್ಲಿ ಪ್ರವಾಹ ಎಷ್ಟಿದೆ, ಹೇಗಿದೆ ಎಂದು ನೋಡಿಕೊಂಡು ನದಿಪಾತ್ರದ ಜನರ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದರು.

ಆಶ್ರಯ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದು, ಮನೆಗಳು ಕುಸಿದಿದ್ದರೆ ಅವರಿಗೆ ಕೂಡಲೇ ಪರಿಹಾರ, ಬೆಳೆ ನಾಶದ ಬಗ್ಗೆ ಸಮೀಕ್ಷೆ ನಡೆಸಬೇಕೆಂದು ಸೂಚಿಸಲಾಗಿದೆ. ಇವೆಲ್ಲದಕ್ಕೂ ಸರ್ಕಾರದಿಂದ ಮೂಲಭೂತ ಸೌಕರ್ಯಗಳಿಗೆ 500 ಕೋಟಿ ರೂಪಾಯಿ ಹಣ ಒದಗಿಸಲಾಗಿದೆ, ಇದು ತಕ್ಷಣಕ್ಕೆ ಆಗಬೇಕಾದ ಪುನರ್ವಸತಿ ಕೆಲಸಗಳಿಗೆ ಆಗಿದ್ದು ನಂತರ ಶಾಶ್ವತ ಕಾರ್ಯಕ್ರಮಕ್ಕೆ ಬೇರೆಯ ಯೋಜನೆಗಳನ್ನು ಸರ್ಕಾರ ಸಿದ್ಧಪಡಿಸಲಿದೆ ಎಂದರು.

ಮನೆಗಳ ನಿರ್ಮಾಣಕ್ಕೆ ಸರ್ಕಾರ ಪರಿಹಾರವನ್ನು ಹೆಚ್ಚಿಸಿದೆ, ಕೇಂದ್ರ ಸರ್ಕಾರ ಬೆಳೆನಾಶಕ್ಕೆ ನೀಡುವ ಪರಿಹಾರಕ್ಕಿಂತ ಕಳೆದ ಬಾರಿಯಂತೆ ಈ ಬಾರಿ ಕೂಡ ರಾಜ್ಯಸರ್ಕಾರ ಹೆಚ್ಚುಮಾಡಿದೆ. ಇವೆಲ್ಲದಕ್ಕೂ ಸರ್ಕಾರ ಆದೇಶ ಹೊರಡಿಸಿದೆ. ಪ್ರವಾಹ ಸಂದರ್ಭದಲ್ಲಿ ತೊಂದರೆಗೀಡಾದವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡುತ್ತದೆ, ಜನರು ಭೀತಿಗೊಳಗಾಗಬೇಕಿಲ್ಲ ಎಂದರು.

ಬಿಜೆಪಿಯಿಂದ ರ್ಯಾಲಿ: ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷ ಮತ್ತು ಸರ್ಕಾರ ಯಾವ ರೀತಿ ಸಮನ್ವಯದಿಂದ ಮುಂದುವರಿಯಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರ ತಂದಿರುವ ಯೋಜನೆಗಳು ಮತ್ತು ಮಾಡಿರುವ ಕೆಲಸಗಳನ್ನು ಮನೆಮನೆಗೆ ಮುಟ್ಟಿಸಲು ಅಭಿಯಾನ ಮಾಡಬೇಕೆಂದು ಬಿಜೆಪಿ ಚಿಂತನಾ ಸಮಾವೇಶದಲ್ಲಿ ತೀರ್ಮಾನಿಸಲಾಗಿದೆ ಎಂದರು.

ಇದೇ ವೇಳೆ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಇದೇ 28ಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಅಂದು ವಿಶೇಷ ರ್ಯಾಲಿಯನ್ನು ನಡೆಸಲಾಗುತ್ತದೆ. ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮ ಅದಾಗಿದ್ದು ಅಂದು ಬೆಂಗಳೂರಿನಲ್ಲಿ ಸರ್ಕಾರದ ಕಾರ್ಯಕ್ರಮವಿರುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com