ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ವೇಳೆ 23 ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡಿದ್ದ ರಸ್ತೆ ಕಳಪೆ ಕಾಮಗಾರಿ ಹಿನ್ನೆಲೆ ಇಬ್ಬರು ಎಂಜಿನಿಯರ್ಗಳನ್ನು ಬಿಬಿಎಂಪಿ ಅಮಾನತು ಮಾಡಿದೆ.
ಕಳಪೆ ಕಾಮಗಾರಿ ಸಂಬಂಧ ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಬಿಬಿಎಂಪಿ, ಎಂಜಿನಿಯರ್ಗಳಿಗೆ ನೋಟೀಸ್ ನೀಡಿದ್ದು, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದರು. ಪ್ರಧಾನಿ ಕಚೇರಿಯಿಂದಲೂ ವರದಿ ಕೇಳಿದ್ದ ಹಿನ್ನಲೆ ಸ್ಥಳಕ್ಕೆ ಹೋಗಿ ಗುಣಮಟ್ಟ ಪರಿಶೀಲನೆ ಮಾಡಲಾಗಿದೆ.
ಪರಿಶೀಲನೆ ವೇಳೆ ಕಳಪೆ ಕಾಮಗಾರಿ ಮಾಡಿರುವುದು ರುಜುವಾತಾಗಿದ್ದು, 40 ಎಂ.ಎಂ ಡಾಂಬರೀಕರಣ ಮಾಡಬೇಕಿದ್ದ ಜಾಗದಲ್ಲಿ, 30 ಎಂ.ಎಂ ರಸ್ತೆ ಡಾಂಬರೀಕರಣ ಮಾಡಿದ್ದು, ತನಿಖೆ ವೇಳೆ ಕಳಪೆ ಕಾಮಗಾರಿ ಪತ್ತೆಯಾಗಿದೆ. ತನಿಖೆ ವರದಿ ಆಧರಿಸಿ ಎ.ರವಿ, ಸಹಾಯಕ ಕಾರ್ಯನಿರ್ವಹಕ ಅಭಿಯಂತರರು ಹಾಗೂ ವಿಶ್ವಾಸ್ ಐ.ಕೆ ಸಹಾಯಕ ಅಭಿಯಂತರರನ್ನ ಸೇವೆಯಿಂದ ಅಮಾನತು ಮಾಡಿ ಬಿಬಿಎಂಪಿ ಆಡಳಿತ ವಿಭಾಗದ ಉಪಯುಕ್ತ ಆದೇಶ ಹೊರಡಿಸಿದೆ.
ಕಳೆದ ತಿಂಗಳು, ಮಾಧ್ಯಮಗಳಲ್ಲಿ ವರದಿ ನಂತರ ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ಇಲಾಖೆಯು ನಿರ್ಲಕ್ಷತನದ ಆರೋಪದ ಮೇಲೆ ಕಾರ್ಯಪಾಲಕ ಎಂಜಿನಿಯರ್ ಎಂ.ಟಿ.ಬಾಲಾಜಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಜೆ.ರವಿ ಮತ್ತು ಸಹಾಯಕ ಎಂಜಿನಿಯರ್ ಐ.ಕೆ.ವಿಶ್ವಾಸ್ ಅವರಿಗೆ ನೋಟಿಸ್ ನೀಡಿ ವಿವರಣೆ ಕೋರಿತ್ತು, ಇದರ ಜೊತೆಗೆ ಗುತ್ತಿಗೆದಾರ ರಮೇಶ್ ಗೆ 3 ಲಕ್ಷ ದಂಡ ವಿಧಿಸಿ ತನಿಖೆಗೆ ಆದೇಶಿಸಿತ್ತು.
ಅಮಾನತುಗೊಂಡ ಅಧಿಕಾರಿಗಳು ಹರಕೆಯ ಕುರಿಯಾಗಿದ್ದಾರೆ, ಆದರೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಬಂಧನದ ಭೀತಿಯಿಂದ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ಕೆಎಚ್‌ಬಿ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸುದರ್ಶನ್ ಬಹಿರಂಗವಾಗಿಯೇ ಆರೋಪಿಸಿದ್ದಾರೆ.
ಈ ಕಾಮಗಾರಿಯನ್ನು ರಸ್ತೆ ಮೂಲಸೌಕರ್ಯ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಮಂಜೂರು ಮಾಡಿದ್ದಾರೆ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಎಂಟಿ ಬಾಲಾಜಿ ಅವರು ಬಿಲ್ ಬುಕ್ ನಿರ್ವಹಿಸಿದ್ದಾರೆ. ಈ ಇಬ್ಬರು ವ್ಯಕ್ತಿಗಳನ್ನು ಉಳಿಸಲು, ಅಮಾಯಕರನ್ನು ಗುರಿಯಾಗಿಸಲಾಗಿದೆ ಎಸ್ ಸುದರ್ಶನ್ ಆರೋಪಿಸಿದ್ದಾರೆ.
Advertisement